ಇತ್ತೀಚೆಗಷ್ಟೇ ಮಾಂಜಾ ದಾರ ಮಾನವ ಕುಲಕ್ಕೆ ಕಂಟಕವಾಗಿದ್ದು, ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಮಹಿಳೆಯೊಬ್ಬರು ದಾರುಣವಾಗಿ ಪ್ರಾಣ ಬಿಟ್ಟಿದ್ದರು. ಆದರೆ ಈ ಮಾಂಜಾ ದಾರ ಈಗ ಮುಖಪ್ರಾಣಿಗಳ ಜೀವಕ್ಕೂ ಕಂಟಕವಾಗಿದೆ. ಧಾರವಾಡದ ಮನೆಯೊಂದರಲ್ಲಿ ಮಾಂಜಾ ದಾರಕ್ಕೆ ಸಿಲುಕಿ ಮುಂಗುಸಿ ಒದ್ದಾಡುತ್ತಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಅದರ ಪ್ರಾಣ ಉಳಿದಿದೆ.
ಹೌದು, ಧಾರವಾಡದ ಅಜಾದ್ ನಗರದ ಮನೆಯೊಂದರಲ್ಲಿ ಮಾಂಜಾ ದಾರಕ್ಕೆ ಮುಂಗುಸಿ ಸಿಲುಕಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಧಾರವಾಡದ ಪ್ರಾಣಿಪ್ರೇಮಿ ಸೋಮಶೇಖರ್ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸೋಮಶೇಖರ್ ಅವರು, ಮುಂಗುಸಿಯ ದೇಹ ಹಾಗೂ ಕಾಲಿಗೆ ಮಾಂಜಾ ದಾರ ಸಿಲುಕಿ ಒದ್ದಾಡುತ್ತಿರುವುದನ್ನು ನೋಡಿ, ಉಪಾಯದಿಂದ ಮುಂಗುಸಿಯನ್ನು ಹಿಡಿದು ಅದಕ್ಕೆ ಸಿಲುಕಿಕೊಂಡಿದ್ದ ದಾರ ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮಶೇಖರ್ ಅವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
