ಬೆಳಗಾವಿಯ ಉಷಾ ಕಾಲನಿಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 16ನೇ ವರ್ಷದ ದಸರಾ ಮಹೋತ್ಸವವು ಶ್ರದ್ಧಾ-ಭಕ್ತಿಯಿಂದ ನೆರವೇರಿತು. ಮಹೋತ್ಸವದ ಸಮಾರೋಪದ ಅಂಗವಾಗಿ ಆಯೋಜಿಸಲಾಗಿದ್ದ ಚಂಡಿಕಾ ಹೋಮದ ಪೂರ್ಣಾಹುತಿ, ಶಮಿ ಪೂಜೆ ಹಾಗೂ ಸೀಮೋಲ್ಲಂಘನ ಧಾರ್ಮಿಕ ಕಾರ್ಯಕ್ರಮಗಳ ನಂತರ ಸಾವಿರಾರು ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.

ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿರುವ ಉಷಾ ಕಾಲೋನಿಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 16ನೇ ವರ್ಷದ ನವರಾತ್ರಿ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಪೂಜಾ ಕಾರ್ಯಕ್ರಮಗಳ ನಂತರ ಬುಧವಾರ ರಾತ್ರಿ ಸಾವಿರಾರು ಭಕ್ತಾದಿಗಳಿಗೆ ಭಕ್ತಿಪೂರ್ವಕವಾಗಿ ಮಹಾಪ್ರಸಾದ ವಿತರಣೆ ಮಾಡಲಾಯಿತು.

ಅಕ್ಟೋಬರ್ 11 ರಂದು ಮಹಾಅಭಿಷೇಕ, ಗಣಹೋಮ ಹಾಗೂ ಘಟಸ್ಥಾಪನೆಯೊಂದಿಗೆ ಆರಂಭಗೊಂಡಿದ್ದ ಈ ಧಾರ್ಮಿಕ ಉತ್ಸವದಲ್ಲಿ ಪ್ರತಿದಿನವೂ ಮಧ್ಯಾಹ್ನ ಚಂಡಿಕಾ ಹೋಮ ಮತ್ತು ಮಹಾಮಂಗಳಾರತಿ ಕೈಂಕರ್ಯಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿದವು.

ಉತ್ಸವದ ಮುಖ್ಯ ಭಾಗವಾಗಿ ಅಕ್ಟೋಬರ್ 19 ರಂದು ಕಾರಂಜಿ ಮಠದ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ವಿಶೇಷ ಕನ್ನಿಕಾ ಪೂಜೆ ಜರುಗಿತು. ವಿಜಯದಶಮಿಯ ದಿನವಾದ ಅಕ್ಟೋಬರ್ 21ರ ಬುಧವಾರ ಸಾಯಂಕಾಲ 6:30ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿ, ಶಮಿ ಪೂಜೆ ಹಾಗೂ ಸೀಮೋಲ್ಲಂಘನ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಿದವು.
ಈ ಧಾರ್ಮಿಕ ಸಮಾರಂಭವು ಮುರಗೋಡದ ಶ್ರೀ ಮಹಾಂತ ದುರುದುಂಡೀಶ್ವರ ಮಠದ ಶ್ರೀ ಮ.ನಿ.ಪ್ರ. ನೀಲಕಂಠ ಮಹಾಸ್ವಾಮಿಗಳು ಹಾಗೂ ಹುಕ್ಕೇರಿಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಜರುಗಿತು. ಕೊನೆಯ ದಿನವಾದ ಬುಧವಾರ ಸಾವಿರಾರು ಭಕ್ತರು ಮಹಾಪ್ರಸಾದವನ್ನು ಸ್ವೀಕರಿಸಿದರು.
ದೇವಸ್ಥಾನ ಸಮಿತಿಯ ಅಧ್ಯಕ್ಷ ದೇವಿ ಹಿರೇಮಠ, ಖಜಾಂಚಿ ಸತೀಶ್ ಮಾಳವದೆ, ಪ್ರಕಾಶ ಹೆಗಡೆ ಹಾಗೂ ನಾಗೇಶ್ ಪಾಟೀಲ್ ಅವರ ನೇತೃತ್ವದಲ್ಲಿ ಮಹೋತ್ಸವವು ಯಶಸ್ವಿಯಾಗಿ ನೆರವೇರಿತು.
