Vijaypura

ಹೊಲದಲ್ಲಿ ತೊಗರಿ, ಮರೆಯಲ್ಲಿ ಗಾಂಜಾ; ವಿಜಯಪುರ ಪೊಲೀಸರ ಭರ್ಜರಿ ಬೇಟೆ!

Share

ವಿಜಯಪುರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಬಸವನ ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದ ಹೊಲವೊಂದರಲ್ಲಿ ಅಕ್ರಮವಾಗಿ ಬೆಳೆದಿದ್ದ ₹1.1 ಕೋಟಿ ಮೌಲ್ಯದ 200 ಕೆ.ಜಿಗೂ ಅಧಿಕ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ವಿಜಯಪುರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತ ಆರೋಪಿ ಯನ್ನು ಶಿವಶಂಕರ್ ಶರಣಪ್ಪ ಜೀರ್ ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.

ಆರೋಪಿಯು ತನ್ನ ಜಮೀನಿನಲ್ಲಿ ತೊಗರಿ ಬೆಳೆ ಬೆಳೆದಿದ್ದು, ಅದರ ಮರೆಯಲ್ಲಿ 500ಕ್ಕೂ ಹೆಚ್ಚು ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆಸಿದ್ದ ಎನ್ನಲಾಗಿದೆ. ಈ ಕುರಿತು ಬೀಟ್ ಪೊಲೀಸ್ ಸಿಬ್ಬಂದಿಗೆ ಖಚಿತ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಬಸವನ ಬಾಗೇವಾಡಿ ಉಪವಿಭಾಗದ ಡಿವೈಎಸ್‌ಪಿ ಚಂದ್ರಕಾಂತ ನಂದರೆಡ್ಡಿ ಹಾಗೂ ಗುರುಶಾಂತ ದಾಶ್ಯಾಳ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ, ಅಕ್ರಮ ಗಾಂಜಾ ಬೆಳೆಯನ್ನು ಪತ್ತೆಹಚ್ಚಿ ಜಪ್ತಿ ಮಾಡಿದೆ ಎಂದು ಎಸ್‌ಪಿ ವಿವರಿಸಿದರು. ಎನ್‌ಡಿಪಿಎಸ್ ಕಾಯ್ದೆಯ ನಿಯಮಗಳಡಿ ಅಗತ್ಯ ಕಾನೂನು ಪ್ರಕ್ರಿಯೆ ಕೈಗೊಂಡು ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿದ ಡಿವೈಎಸ್‌ಪಿ ಚಂದ್ರಕಾಂತ ನಂದರೆಡ್ಡಿ, ಗುರುಶಾಂತ ದಾಶ್ಯಾಳ ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಎಸ್‌ಪಿ ಶ್ಲಾಘಿಸಿದರು. ಅಲ್ಲದೆ, ತಂಡದ ಸದಸ್ಯರಿಗೆ ಬಹುಮಾನ ಘೋಷಿಸಿರುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಅಕ್ರಮ ತಯಾರಿಕೆ, ಸಾಗಣೆ, ಮಾರಾಟ ಹಾಗೂ ಬಳಕೆಯನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೀಟ್ ಸಿಬ್ಬಂದಿ ಮೂಲಕ ನಿಗಾ ವಹಿಸಲಾಗುತ್ತಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಅಕ್ರಮ ಚಟುವಟಿಕೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ಲಭ್ಯವಾದಲ್ಲಿ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದ ಅವರು, ಮಾಹಿತಿ ನೀಡುವವರ ಗುರುತನ್ನು ಗೌಪ್ಯ ವಾಗಿಡಲಾಗುವುದು ಹಾಗೂ ಸೂಕ್ತ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

Tags:

error: Content is protected !!