ನವರಾತ್ರಿ ಸಂಭ್ರಮಕ್ಕೆ ಗುಮ್ಮಟನಗರಿ ವಿಜಯಪುರದಲ್ಲಿ ದಾಂಡಿಯಾ ಧಮಾಕಾ ಹೊಸ ಕಳೆ ತಂದಿದೆ. ವಯಸ್ಸಿನ ಹಂಗಿಲ್ಲಾ, ಮಕ್ಕಳು, ಯುವತಿಯರು, ಮಹಿಳೆಯರು, ವಯೋವೃದ್ಧರು ಸೇರಿದಂತೆ ಸಾವಿರಾರು ಜನರು ಒಂದೇ ವೇದಿಕೆಯಲ್ಲಿ ಸೇರಿ ಸಖತ್ ಸ್ಟೆಪ್ ಹಾಕಿದ್ದಾರೆ. ಡಿಜೆ ಚಕೋಲಿಯ ಹಾಡುಗಳಿಗೆ ಫಿದಾ ಆಗಿ, ಕೈ ಮೇಲೆತ್ತಿ ಕುಣಿದು ಕುಪ್ಪಳಿಸಿದ್ದಾರೆ. ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಈ ಅದ್ಧೂರಿ ದಾಂಡಿಯಾ ಸಂಭ್ರಮದ ದೃಶ್ಯಗಳು ನೋಡುಗರನ್ನು ರಂಜಿಸಿದವು. ಅಷ್ಟಕ್ಕೂ ಈ ಕಾರ್ಯಕ್ರಮದ ವಿಶೇಷತೆಗಳೇನು? ಬನ್ನಿ ನೋಡೋಣ.
ಇಲ್ಲಿ ವಯಸ್ಸಿನ ಅಂತರವಿಲ್ಲ, ಕುಣಿಯಲು ಯಾವುದೇ ನಿರ್ಬಂಧವಿಲ್ಲ! ಎಲ್ಲರ ಮುಖದಲ್ಲೂ ಸಂಭ್ರಮ, ಹೆಜ್ಜೆ ಹೆಜ್ಜೆಯಲ್ಲೂ ಉತ್ಸಾಹ! ಹೌದು, ಇದು ಗುಮ್ಮಟನಗರಿ ವಿಜಯಪುರದಲ್ಲಿ ನಡೆದ ಅದ್ಧೂರಿ ದಾಂಡಿಯಾ ಸಂಭ್ರಮದ ದೃಶ್ಯ. ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸ ಲಾಗಿದ್ದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡು ಸಂಭ್ರಮಿಸಿದರು. ಪುಟ್ಟ ಮಕ್ಕಳು, ಕಾಲೇಜು ಯುವತಿಯರು, ಮಹಿಳೆಯರು ಹಾಗೂ ವಯೋವೃದ್ಧರು ಕೂಡ ಸಂಗೀತದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು. ದಾಂಡಿಯಾ ಕೋಲುಗಳ ಲಯಬದ್ಧ ಸದ್ದು, ಬಣ್ಣಬಣ್ಣದ ಉಡುಪುಗಳ ಆಕರ್ಷಣೆ, ಡಿಜೆ ಸಂಗೀತದ ಅಬ್ಬರ ಇಡೀ ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಿತು. ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬಂತೆ ಹಿರಿಯರೂ ಯುವಕರೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.
ಇನ್ನು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು ಡಿಜೆ ಚಕೋಲಿ ಅವರ ಸಂಗೀತದ ಅಬ್ಬರ. ಚಕೋಲಿ ಅವರ ಹಾಡುಗಳಿಗೆ ನೆರೆದಿದ್ದ ಜನರು ಫಿದಾ ಆಗಿದ್ದರು. ಸಂಗೀತದ ವೇಗ ಹೆಚ್ಚಾದಂತೆ ಪ್ರೇಕ್ಷಕರ ಉತ್ಸಾಹವೂ ಮುಗಿಲು ಮುಟ್ಟಿತ್ತು. ಕೈಗಳನ್ನು ಮೇಲೆತ್ತಿ, ಸಂಗೀತದ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಯುವತಿಯರು ಮತ್ತು ಮಹಿಳೆಯರು ಕುಣಿದು ಕುಪ್ಪಳಿಸಿದರು. ಮಕ್ಕಳು ಕೂಡ ಹಿರಿಯರೊಂದಿಗೆ ಸೇರಿಕೊಂಡು ದಾಂಡಿಯಾ ಸಂಭ್ರಮದಲ್ಲಿ ಮಿಂದೆದ್ದರು. ಬಾಲಾಜಿ ಶಿಕ್ಷಣ ಸಂಸ್ಥೆ ಹಾಗೂ ಬಾಲಾಜಿ ಡೆವಲಪರ್ಸ್ನ ಕಾರ್ತಿಕ ಚವ್ಹಾಣ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವನ್ನು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಉದ್ಯಮಿ ವಿಜಯಕುಮಾರ ಚವ್ಹಾಣ, ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ ಹಾಗೂ ಶ್ರೀಮತಿ ಪ್ರೀತಿ ವಿಜುಗೌಡ ಪಾಟೀಲ ಉದ್ಘಾಟಿಸಿದರು. ಆಕರ್ಷಕ ಲೈಟಿಂಗ್, ಡಿಜೆ ಸೌಂಡ್ ಹಾಗೂ ಮನರಂಜನೆಯ ವ್ಯವಸ್ಥೆ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.
ಒಟ್ಟಿನಲ್ಲಿ, ನವರಾತ್ರಿ ಹಬ್ಬದ ಸಂಭ್ರಮಕ್ಕೆ ದಾಂಡಿಯಾ ನೃತ್ಯದ ರಂಗು ಮತ್ತಷ್ಟು ಮೆರುಗು ನೀಡಿದೆ. ವಯಸ್ಸಿನ ಹಂಗಿಲ್ಲದೆ ಎಲ್ಲರೂ ಒಂದಾಗಿ ಕುಣಿದು ಕುಪ್ಪಳಿಸಿದ ಈ ಕಾರ್ಯಕ್ರಮ, ಸಂಗೀತ ಮತ್ತು ನೃತ್ಯಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಾರಿತು. ಡಿಜೆ ಚಕೋಲಿಯ ಹಾಡುಗಳಿಗೆ ವಿಜಯಪುರದ ಜನರು ಮನಸೋತಿದ್ದು, ಗುಮ್ಮಟನಗರಿಯಲ್ಲಿ ದಾಂಡಿಯಾ ಧಮಾಕಾ ಸಂಭ್ರಮದ ನೆನಪುಗಳನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.
ವಿಜಯಕುಮಾರ ಸಾರವಾಡ,
ಇನ್ ನ್ಯೂಜ್,
ವಿಜಯಪುರ.
