Belagavi

ಗ್ರಾಮೀಣ ಭಾಗದಲ್ಲೇ ಕನ್ನಡದ ಬೇರುಗಳು ಗಟ್ಟಿ: ಅಶೋಕ ಚಂದರಗಿ

Share

ಬೆಳಗಾವಿ: ನಗರ ಪ್ರದೇಶಗಳಗಿಂತಲೂ ಗ್ರಾಮೀಣ ಪ್ರದೇಶಗಳಲ್ಲೇ ಕನ್ನಡದ ಬೇರುಗಳು ಗಟ್ಟಿಯಾಗಿವೆ.ಕನ್ನಡ ಹೋರಾಟಕ್ಕೆ ಧುಮುಕುತ್ತಿರುವ ಯುವಕರಲ್ಲಿ ಗ್ರಾಮೀಣ ಯುವಕರೇ ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು ಹಿರಿಯ ಕನ್ನಡ ಹೋರಾಟಗಾರ ಶ್ರೀ ಅಶೋಕ ಚಂದರಗಿ ಹೇಳಿದ್ದಾರೆ.

ರವಿವಾರ ಮಧ್ಯಾನ್ಹ ಹುಕ್ಕೇರಿ ತಾಲೂಕಿನ ರಾಜಕಟ್ಟೆ ಗ್ರಾಮದಲ್ಲಿ ಗಡಿನಾಡು ಕನ್ನಡಿಗರ ಸೇನೆಯ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು,ಎಂಭತ್ತರ ದಶಕದಲ್ಲಿ ಬೆಳಗಾವಿ ಗಡಿಭಾಗದಲ್ಲಿದ್ದ ಸ್ಥಿತಿ ಈಗಿಲ್ಲ.ರಾಜ್ಯೋತ್ಸವ ದಿನದಂದು ಮುಂಜಾನೆ 10 ಗಂಟೆಯಿಂದ ಮಧ್ಯಾನ್ಹ 2 ಗಂಟೆಗೆ ರಾಜ್ಯೋತ್ಸವ ಮೆರವಣಿಗೆ ಮುಗಿಯುತ್ತಿತ್ತು.ಈಗ ಮುಂಜಾನೆಯಿಂದ ರಾತ್ರಿ 12 ಗಂಟೆಯವರೆಗೆ ನಡೆಯುವ ಮೆರವಣಿಗೆಯಲ್ಲಿ ರಾಜ್ಯದಾದ್ಯಂತದ ಆರೇಳು ಲಕ್ಷ ಜನರು ಸೇರುತ್ತಾರೆ.ಮೈಸೂರು ದಸರಾ ಮೆರವಣಿಗೆಗಿಂತಲೂ ಬೆಳಗಾವಿ ಮೆರವಣಿಗೆ ಅದ್ಧೂರಿಯಾಗಿ ನಡೆಯುತ್ತದೆ ಎಂದು ಹೇಳಿದರು.
ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕಾರಕ್ಕಾಗಿ ಆರು ತಿಂಗಳು ಕಾಲ ನಡೆದ ಹೋರಾಟದಲ್ಲಿ 22 ಸಮಾನ ಮನಸ್ಕ ಕನ್ನಡ ಸಂಘಟನೆಗಳು ಭಾಗಿಯಾಗಿದ್ದವು.ಕನ್ನಡ ಸಂಘಟನೆಗಳ ಒಗ್ಗಟ್ಟಿನ ಹೋರಾಟದಿಂದಾಗಿ ಯಶಸ್ಸು ಸಾಧ್ಯವಾಯಿತು ಎಂದು ಅಶೋಕ ಚಂದರಗಿ ಹೇಳಿ, ಈ ಹಿಂದಿನ ಹೋರಾಟಗಳು ಮಹಾರಾಷ್ಟ್ರ ಏಕೀಕರಣ ಸಮಿತಿಯ
ನಾಡದ್ರೋಹದ ವಿರುದ್ಧವಾಗಿದ್ದವು.ಇಂದು ನಮ್ಮವರೇ
ನಮಗೆ ಮಾಡುವ ದ್ರೋಹದ ವಿರುದ್ಧದ ಹೋರಾಟವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಶ್ರೀ ಬಲರಾಮ ಮಾಸೇನಟ್ಟಿ ಅವರು ಮಾತನಾಡಿ,ಗ್ರಾಮ ಗ್ರಾಮಗಳಲ್ಲಿ ಸೇನೆಯ ಘಟಕಗಳನ್ನು ಆರಂಭಿಸಲು ಯುವಕರು ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು.
ಬೆಳಗಾವಿ ಪಾಲಿಕೆಯಲ್ಲಿ ಮಹಾಜನ ಆಯೋಗದ ವರದಿಯೇ ಅಂತಿಮ ಎಂಬ ಗೊತ್ತುವಳಿ ಪಾಸಾಗಲು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ,ಮಾಜಿ ಗಡಿ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹಾಗೂ ಅಶೋಕ ಚಂದರಗಿ ತ್ರಿಮೂರ್ತಿಗಳು ಕಾರಣರಾಗಿದ್ದಾರೆ.ರಾಜ್ಯದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಹಕಾರ,ಬೆಂಬಲ ನೀಡಿದ್ದಾರೆ ಎಂದು ಹೇಳಿದರು.
ವೇದಿಕೆಯ ಮೇಲೆ ಲಗಮಣ್ಣ ಪಣಗುತ್ತಿ,ಸಂತೋಷ ತಳ್ಳಿಮನಿ,ಶಿವಾಜಿ ಗುರವ,ರಾಹುಲ್ ಭೋಸ್ಲೆ,ಭೀಮಶಿ
ಕುಪಾಣಿ,ರಾಜಕಟ್ಟೆ ಗಡಿನಾಡು ಕನ್ನಡಿಗರ ಸೇನೆ ಘಟಕದ ಅಧ್ಯಕ್ಷ ಯಲ್ಲಪ್ಪ ಹಂಚಿನಮನಿ,ಉಪಾಧ್ಯಕ್ಷ ಲಕ್ಷ್ಮಣ ದುಮ್ಮನಾಯಕ,ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಪೂಜಾರಿ,ಸಂಘಟನಾ ಕಾರ್ಯದರ್ಶಿ ಈರಪ್ಪ
ಡುಮ್ಮನಾಯ್ಕ,ಸಹ ಕಾರ್ಯದರ್ಶಿ ಅರ್ಜುನ ಗಡ್ಕರಿ,ಗ್ರಾಮದ ಹಿರಿಯರಾದ ಯಲ್ಲಪ್ಪ ಕಾರಣವರ,ಬಸ್ಸು ಪೂಜಾರಿ,ಬಸ್ಸು ರೋನೀ,ಬಸ್ಸು ದುಮ್ಮನಾಯಕ,ಬಸ್ಸು
ಬಿಜ್ಜನಾಯಕ,ಲಗಮಣ್ಣ ಕೋಚರಗಿ ಹಾಗೂ ಈರಪ್ಪ ಪೂಜೇರಿ ಉಪಸ್ಥಿತರಿದ್ದರು.
ಆರಂಭದಲ್ಲಿ ಸೇನೆಯ ಬೆಳಗಾವಿ ಜಿಲ್ಲಾಧ್ಯಕ್ಷ ಎಸ್.ಎಸ್.ಮೂಕನವರ ಅವರು ಸ್ವಾಗತಿಸಿ ಕೊನೆಗೆ ಆಭಾರ ಮನ್ನಿಸಿದರು.

Tags:

error: Content is protected !!