ಬೆಳಗಾವಿ: ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ಕಂಡೇಯ ನದಿಯಲ್ಲಿ ಅರ್ಧ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಮೃತನ ಸಾವಿನಲ್ಲಿ ಅನುಮಾನ ವ್ಯಕ್ತವಾಗಿದ್ದು, ಈತನ ಗುರುತು ಪತ್ತೆಗಾಗಿ ಸಾರ್ವಜನಿಕರ ನೆರವನ್ನು ಪೊಲೀಸರು ಕೋರಿದ್ದಾರೆ.
ದಿನಾಂಕ 17/10/2026 ರಂದು ಕಾಕತಿ ನಿವಾಸಿ ಮದನ್ ಸಿದ್ರಾಯಿ ಕಡೋಲಕರ ಅವರು ಹೊಲಕ್ಕೆ ತೆರಳಿದ್ದಾಗ ಮಾರ್ಕಂಡೇಯ ನದಿಯಲ್ಲಿ ಅರ್ಧ ಕೊಳೆತ ಸ್ಥಿತಿಯಲ್ಲಿ ಗಂಡಸಿನ ಶವ ಕಂಡುಬಂದಿದೆ. ಈ ಕುರಿತು ನೀಡಿದ ದೂರಿನನ್ವಯ ಕಾಕತಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ: 43/2026, ಕಲಂ: 194(3)(iv) ಬಿಎನ್ಎಸ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮೃತನಿಗೆ ಅಂದಾಜು 40 ರಿಂದ 45 ವರ್ಷ ವಯಸ್ಸಾಗಿದ್ದು, 5 ಅಡಿ 5 ಇಂಚು ಎತ್ತರವಿದ್ದಾನೆ. ನೀಲಿ ಬಣ್ಣದ ಆಫ್ ಪ್ಯಾಂಟ್ ಹಾಗೂ ಚಾಕೊಲೇಟ್ ಬಣ್ಣದ ನಿಕ್ಕರ್ ಧರಿಸಿದ್ದು, ಬಲಗೈನಲ್ಲಿ ‘ರಾಕಿ’ ಎಂದು ಬರೆಯಲಾಗಿದೆ. ಈ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ಅಥವಾ ಸುಳಿವು ಲಭ್ಯವಿದ್ದಲ್ಲಿ ಸಾರ್ವಜನಿಕರು ಬೆಳಗಾವಿ ನಗರ ಪೊಲೀಸ್ ಕಂಟ್ರೋಲ್ ರೂಂ (08312405233) ಅಥವಾ ಕಾಕತಿ ಪೊಲೀಸ್ ಇನ್ಸ್ಪೆಕ್ಟರ್ (9480804115) ಹಾಗೂ 112 ನಂಬರ್ಗೆ ಸಂಪರ್ಕಿಸಲು ಕೋರಲಾಗಿದೆ.
