ಬೆಳಗಾವಿ ನಗರದಲ್ಲಿ ಅಕ್ರಮವಾಗಿ ಹೆರಾಯಿನ್ ಮಾದಕ ಪದಾರ್ಥ ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಹೆದ್ದಾರಿ ಬಳಿ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಹೆರಾಯಿನ್ ಹಾಗೂ ಮೊಬೈಲ್ಗಳನ್ನು ಜಪ್ತಿ ಮಾಡಿದ್ದಾರೆ.

ದಿನಾಂಕ 17/10/2026 ರಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪಿಐ ಮಂಜುನಾಥ್ ನಾಯಕ್ ಹಾಗೂ ಸಿಬ್ಬಂದಿಯವರು ಬೆಳಗಾವಿ ನಗರದ ರಾಷ್ಟ್ರೀಯ ಹೆದ್ದಾರಿ ಹತ್ತಿರದ ಜೈ ಕಿಸಾನ್ ಬಾಜಿ ಮಾರ್ಕೆಟ್ ಗೇಟ್ ನಂ.1ರ ಬಳಿ ದಾಳಿ ನಡೆಸಿದರು. ಈ ವೇಳೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಹೆರಾಯಿನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಬೆಳಗಾವಿಯ ಮಹಾಂತೇಶ ರಾಮಣ್ಣ ಅಂಬಿಗೇರ (37) ಮತ್ತು ಆಕಾಶ್ ಸುರೇಶ್ ನಂದಿ (28) ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ 2,90,000 ರೂ. ಮೌಲ್ಯದ 14.49 ಗ್ರಾಂ ಹೆರಾಯಿನ್ ಪೌಡರ್ (124 ಸಣ್ಣ ಚೀಲಗಳಲ್ಲಿ) ಹಾಗೂ 10,000 ರೂ. ಮೌಲ್ಯದ 2 ಮೊಬೈಲ್ ಸೇರಿ ಒಟ್ಟು 3,00,000 ರೂ. ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಮಹಾರಾಷ್ಟ್ರದ ‘ಅಮ್ಮಾ’ ಎಂಬಾತರಿಂದ ಈ ಮಾದಕ ವಸ್ತುವನ್ನು ತಂದಿರುವುದಾಗಿ ಆರೋಪಿಗಳು ತಿಳಿಸಿದ್ದು, ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ದಾಳಿ ನಡೆಸಿದ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿಯವರು ಶ್ಲಾಘಿಸಿದ್ದಾರೆ.
