Athani

ಅಥಣಿಯಲ್ಲಿ ಭೀಕರ ಅಗ್ನಿ ಅವಘಡ: ಬೆಂಕಿಗಾಹುತಿಯಾದ ಕೋಟಿ ಮೌಲ್ಯದ ಮಳಿಗೆ!

Share

ಅಥಣಿಯ ಇಡೀ ಪಟ್ಟಣ ನಿದ್ದೆಯಲ್ಲಿದ್ದಾಗ ಜತ್ ರಸ್ತೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ನಸುಕಿನ 3:30ಕ್ಕೆ ಕಾಣಿಸಿಕೊಂಡ ಒಂದು ಕಿಡಿ, ಕೆಲವೇ ನಿಮಿಷಗಳಲ್ಲಿ ಕೋಟ್ಯಂತರ ಕನಸುಗಳನ್ನು ಸುಟ್ಟು ಬೂದಿ ಮಾಡಿದೆ.

ಅಥಣಿ ಪಟ್ಟಣದ ಹೆಸರಾಂತ ಬ್ರಹ್ಮಾ ಎಂಟರ್‌ಪ್ರೈಸಸ್ ಪೀಠೋಪಕರಣ, ಬ್ರಾಂಡೆಡ್ ಬಟ್ಟೆ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ದೊಡ್ಡ ಮಳಿಗೆ ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ.

ಮಧ್ಯರಾತ್ರಿ ಏಕಾಏಕಿ ಮಳಿಗೆಯೊಳಗಿಂದ ಹೊಗೆ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಬೆಂಕಿಯ ಜ್ವಾಲೆ ಇಡೀ ಅಂಗಡಿಯನ್ನು ಆವರಿಸಿದೆ. ಒಳಗಿದ್ದ ಸೋಫಾ, ಬೆಡ್, ಟಿವಿ, ಫ್ರಿಜ್, ದುಬಾರಿ ಬಟ್ಟೆಗಳು – ಯಾವುದೂ ಉಳಿದಿಲ್ಲ. ಎಲ್ಲವೂ ಕಣ್ಣೆದುರೇ ಸುಟ್ಟು ಕರಕಲಾಗಿದೆ.

ಸದ್ದು ಕೇಳಿ ಓಡಿ ಬಂದ ಸ್ಥಳೀಯರು ನೀರು ಹಾಕಿ ನಂದಿಸಲು ಯತ್ನಿಸಿದರೂ ಬೆಂಕಿಯ ರೌದ್ರಾವತಾರದ ಮುಂದೆ ಅವರ ಪ್ರಯತ್ನ ವಿಫಲವಾಗಿದೆ.
ಸುದ್ದಿ ತಿಳಿದು ಬಂದ ಅಗ್ನಿಶಾಮಕ ವಾಹನ, ಬೆಂಕಿಯ ತೀವ್ರತೆಗೆ ನೀರು ಸಾಲದೆ ಹಲವು ಬಾರಿ ವಾಪಸ್ ಹೋಗಿ ನೀರು ತುಂಬಿ ತರಬೇಕಾಯಿತು. ಸುಮಾರು 2 ಗಂಟೆಗಳ ಹೋರಾಟದ ನಂತರ ಬೆಂಕಿ ನಿಯಂತ್ರಣಕ್ಕೆ ಬಂದಿದೆ.
100 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಬೆಂಕಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಶಾರ್ಟ್ ಸರ್ಕ್ಯೂಟ್ ನಿಂದಲೇ ಈ ಅವಘಡ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.
ಅದೃಷ್ಟವಶಾತ್ ಮಳಿಗೆಯಲ್ಲಿ ಯಾರೂ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ. ಇಲ್ಲದಿದ್ದರೆ ಪರಿಸ್ಥಿತಿ ಇನ್ನೂ ಭೀಕರವಾಗುತ್ತಿತ್ತು. ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:

error: Content is protected !!