ಬೆಳಗಾವಿ ಜಿಲ್ಲೆಯಲ್ಲಿ ಗೋಮಾತೆಯನ್ನು ರಾಷ್ಟ್ರಮಾತೆಯನ್ನಾಗಿ ಘೋಷಿಸಲು ಒತ್ತಾಯಿಸಿ ಆರಂಭವಾಗಿರುವ ‘ಗೋ ಸಮ್ಮಾನ್ ಆಹ್ವಾನ ಅಭಿಯಾನ’ದ ಸಭೆ ಯಶಸ್ವಿಯಾಗಿ ಜರುಗಿದೆ. ಜಿಲ್ಲೆಯಾದ್ಯಂತ ಮೂರು ಲಕ್ಷ ಸಹಿಗಳನ್ನು ಸಂಗ್ರಹಿಸಿ, ಮುಂಬರುವ ಡಿಸೆಂಬರ್ 17 ರಂದು ಬೆಂಗಳೂರು ಚಲೋ ಮೂಲಕ ಸರ್ಕಾರದ ಗಮನ ಸೆಳೆಯಲು ಭರ್ಜರಿ ಸಿದ್ಧತೆ ನಡೆಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸಾಧು-ಸಂತರ ಮಾರ್ಗದರ್ಶನದಲ್ಲಿ ಸನಾತನ ಧರ್ಮದ ಸಂಸ್ಕೃತಿ ಮತ್ತು ಗೋಮಾತೆಯ ರಕ್ಷಣೆಗಾಗಿ ‘ಗೋ ಸಮ್ಮಾನ್ ಆಹ್ವಾನ ಅಭಿಯಾನ’ದ ಮಹತ್ವದ ಸಭೆ ನಡೆಯಿತು. ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿ ಮತ್ತು ತಾಲೂಕು ಮಟ್ಟದಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ತೀವ್ರಗೊಳಿಸಿ, ಸುಮಾರು ಮೂರು ಲಕ್ಷ ಸಹಿಗಳನ್ನು ಸಂಗ್ರಹಿಸಿ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಗೋಮಾತೆಯನ್ನು ರಾಷ್ಟ್ರಮಾತೆಯನ್ನಾಗಿ ಘೋಷಿಸುವಂತೆ ಆಗ್ರಹಿಸಿ ಡಿಸೆಂಬರ್ 17, 2026 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಸಭೆಗೆ ಬೆಳಗಾವಿ ಜಿಲ್ಲೆಯಿಂದ ಐದು ಸಾವಿರಕ್ಕೂ ಅಧಿಕ ಹಿಂದೂ ಬಾಂಧವರು ಹಾಗೂ ಗೋಪ್ರೇಮಿಗಳು ಪಾಲ್ಗೊಳ್ಳುವಂತೆ ಗೋ ರಕ್ಷಕ ನಿಲೇಶ ಅವರು ವಿನಂತಿಸಿದ್ದಾರೆ.
