ಬೆಳಗಾವಿಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಯುವ ಜನತೆಗೆ ಉದ್ಯೋಗದ ಹೊಸ ಹಾದಿಗಳನ್ನು ಮುಕ್ತಗೊಳಿಸುವ ಉದ್ದೇಶದಿಂದ ಶಾಸಕ ಅಭಯ್ ಪಾಟಿಲ್ ದೆಹಲಿ ಮಟ್ಟದಲ್ಲಿ ಕಸರತ್ತು ನಡೆಸಿದ್ದಾರೆ. ರಕ್ಷಣಾ ಇಲಾಖೆ ಭೂಮಿ ಹಸ್ತಾಂತರ ಹಾಗೂ ಐಟಿ ಪಾರ್ಕ್ ಸ್ಥಾಪನೆಗಾಗಿ ಕೇಂದ್ರ ಗೃಹ ಸಚಿವರಿಗೆ ನೀಡಿರುವ ಈ ಪ್ರಸ್ತಾವನೆ ಬೆಳಗಾವಿಯ ಕೈಗಾರಿಕಾ ರಂಗಕ್ಕೆ ಮಹತ್ವದ ತಿರುವು ನೀಡುವ ನಿರೀಕ್ಷೆಯಿದೆ.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ, ಬೆಳಗಾವಿಯ ಕೈಗಾರಿಕಾ ಅಭಿವೃದ್ಧಿ ಹಾಗೂ ಸ್ಥಳೀಯ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಕ್ಷಣಾ ಇಲಾಖೆಗೆ ಸೇರಿದ ಜಮೀನನ್ನು ಹಸ್ತಾಂತರಿಸುವಂತೆ ಮತ್ತು ಅಲ್ಲಿ ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಹಾಗೂ ಐಟಿ ಪಾರ್ಕ್ ಸ್ಥಾಪಿಸುವಂತೆ ಮಹತ್ವದ ಮನವಿ ಸಲ್ಲಿಸಿದ್ದಾರೆ. ಈ ಜಮೀನಿನಲ್ಲಿ ಹೊಸ ಕೈಗಾರಿಕೆಗಳು ಮತ್ತು ಫ್ಯಾಕ್ಟರಿಗಳು ತಲೆಎತ್ತುವಂತೆ ಕೇಂದ್ರ ಸರ್ಕಾರ ವಿಶೇಷ ಕಾಳಜಿ ವಹಿಸಬೇಕೆಂದು ಕೋರಿದ್ದು, ಗೃಹ ಸಚಿವರು ಇದಕ್ಕೆ ಧನಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಇದರ ಸಕಾರಾತ್ಮಕ ಪರಿಣಾಮಗಳು ಬೆಳಗಾವಿಯಲ್ಲಿ ಗೋಚರಿಸಲಿವೆ ಎಂದು ಶಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.
