Belagavi

ಹೆದ್ದಾರಿ ಬಂದ್ ಕೈಬಿಟ್ಟು…ಪಾದಯಾತ್ರೆ ಶುರು ಮಾಡಿದ ಕಬ್ಬು ಬೆಳೆಗಾರರು!!!

Share

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿದ್ದ ಹೆದ್ದಾರಿ ಬಂದ್ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ರೈತರು, ಈಗ ಹುಬ್ಬಳ್ಳಿಯತ್ತ ಮುಖ ಮಾಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಹತ್ತರಗಿ ಟೋಲ್‌ನಿಂದ ಬೃಹತ್ ಪಾದಯಾತ್ರೆ ಆರಂಭಿಸಿದ್ದು, ರಾಜ್ಯಾದ್ಯಂತ ಹೋರಾಟ ತೀವ್ರಗೊಂಡಿದೆ.

ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೀವ್ರ ಅಸಡ್ಡೆ ತೋರುತ್ತಿವೆ ಎಂದು ಆರೋಪಿಸಿ ರೈತರು ತಮ್ಮ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಹತ್ತರಗಿ, ಹಿರೇಬಾಗೇವಾಡಿ, ಧಾರವಾಡ ಹಾಗೂ ಹಾವೇರಿ ಟೋಲ್‌ಗಳು ಸೇರಿದಂತೆ ರಾಜ್ಯಾದ್ಯಂತ ಧರ್ಮಾತೀತ ಹಾಗೂ ಪಕ್ಷಾತೀತವಾಗಿ ಹೋರಾಟ ಮುಂದುವರಿದಿದೆ. ಅಧಿಕಾರಿಗಳು ಮತ್ತು ಸಚಿವರಿಗೆ 5 ಗಂಟೆಗಳ ಡೆಡ್‌ಲೈನ್ ನೀಡಿದರೂ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಹೆದ್ದಾರಿ ತಡೆಯನ್ನು ಸ್ಥಗಿತಗೊಳಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹುಬ್ಬಳ್ಳಿ ನಿವಾಸದವರೆಗೆ ಬೃಹತ್ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. “ಕಳೆದ ಎರಡು ತಿಂಗಳಿಂದ ನಾವು ನಿರಂತರ ಹೋರಾಟದಲ್ಲಿದ್ದೇವೆ. ಐದು ಗಂಟೆಗಳ ಡೆಡ್‌ಲೈನ್ ನೀಡಿದರೂ ಯಾವುದೇ ಜಿಲ್ಲಾಧಿಕಾರಿಗಳಾಗಲಿ, ಕೇಂದ್ರ ಅಥವಾ ರಾಜ್ಯ ಸರ್ಕಾರದ ಸಚಿವರಾಗಲಿ ಸ್ಥಳಕ್ಕೆ ಬಂದು ಚರ್ಚಿಸಿಲ್ಲ. ಅನಾರೋಗ್ಯದ ನಡುವೆಯೂ ನಮ್ಮ ಹೋರಾಟ ನಿಲ್ಲುವುದಿಲ್ಲ, ಪಾದಯಾತ್ರೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಶಶಿಕಾಂತ್ ಗುರೂಜಿ ತಿಳಿಸಿದ್ದಾರೆ.

ರೈತರು ತಮ್ಮ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕೆಂದು ಆಗ್ರಹಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ (MSP) ಪ್ರಮಾಣ ಏರಿಕೆಯಾಗಬೇಕು ಮತ್ತು ಮಧ್ಯಪ್ರದೇಶ ಹಾಗೂ ಗುಜರಾತ್ ಮಾದರಿಯಲ್ಲಿ ಶೇ. 90 ರಿಂದ 99 ರಷ್ಟು ಸರ್ಕಾರಿ ಖರೀದಿ ನಡೆಯಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ತಮಿಳುನಾಡು ಮಾದರಿಯಲ್ಲಿ ಕಾರ್ಖಾನೆಗಳಿಂದ ₹500 ಹಾಗೂ ಸರ್ಕಾರದ ವತಿಯಿಂದ ₹1000 ಸೇರಿ ಪ್ರತಿ ಟನ್ ಕಬ್ಬಿಗೆ ಒಟ್ಟು ₹5,500 ವರೆಗೆ ನ್ಯಾಯಯುತ ಬೆಲೆ ನಿಗದಿಪಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ರೈತನಿಗೆ ಸೂಕ್ತ ಬೆಲೆ ಸಿಕ್ಕರೆ ತಮ್ಮ ರಾಜಕೀಯ ಆಟ ನಡೆಯುವುದಿಲ್ಲ ಎಂಬ ಭಾವನೆ ರಾಜಕಾರಣಿಗಳಲ್ಲಿದೆ ಎಂದು ರೈತ ಮುಖಂಡರು ಕಿಡಿಕಾರಿದ್ದಾರೆ.

ಕಳೆದ ಎರಡು ತಿಂಗಳಿಂದ ನಿರಂತರ ಹೋರಾಟದಲ್ಲಿದ್ದು ಆರೋಗ್ಯದಲ್ಲಿ ಏರುಪೇರಾಗಿದ್ದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಚೂನ್ನಪ್ಪ ಪುಜಾರಿ ಹೇಳಿದ್ದು, ಜನಸಾಮಾನ್ಯರಿಗೆ ತೊಂದರೆಯಾಗಬಾರದೆಂದು ಪಾದಯಾತ್ರೆ ನಿರ್ಧಾರ ಮಾಡಿದ್ದೇವೆ. 20 ರಿಂದ 30 ಸಾವಿರ ರೈತರು ಹತ್ತರಗಿಯಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನೆಗೆ ಮುತ್ತಿಗೆ ಹಾಕಲಿದ್ದೇವೆ. ನಾವು ತಲುಪುವುದರೊಳಗೆ ಸರ್ಕಾರ ಎಂಎಸ್‌ಪಿ ಘೋಷಣೆ ಮಾಡಬೇಕು, ಇಲ್ಲವಾದರೆ 50 ಲಕ್ಷ ರೈತರನ್ನು ಸೇರಿಸಿ ಉಗ್ರ ಹೋರಾಟ ಮಾಡುತ್ತೇವೆ.”ಈ ಪಾದಯಾತ್ರೆಗೆ ಕರ್ನಾಟಕದ 31 ಜಿಲ್ಲೆಗಳ ಹಾಗೂ ಮಹಾರಾಷ್ಟ್ರದ ವಿವಿಧ ಸಂಘಟನೆಗಳ ಸಂಪೂರ್ಣ ಬೆಂಬಲ ಸಿಕ್ಕಿದೆ. ಸುಮಾರು 20 ರಿಂದ 30 ಸಾವಿರಕ್ಕೂ ಹೆಚ್ಚು ರೈತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಸರ್ಕಾರ ಈಗಲಾದರೂ ಎಚ್ಚೆತ್ತು ಎಂಎಸ್‌ಪಿ ಘೋಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ 50 ಲಕ್ಷಕ್ಕೂ ಹೆಚ್ಚು ರೈತರನ್ನು ಒಗೂಡಿಸಿ ರಾಜ್ಯಾದ್ಯಂತ ಅತ್ಯಂತ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಗಳು ಮುನ್ನೆಚ್ಚರಿಕೆ ನೀಡಿವೆ.

Tags:

error: Content is protected !!