ಬೆಳಗಾವಿಯ ಹಿಂಡಲಗಾದ ಸೇಂಟ್ ಪೀಟರ್ಸ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಕ್ರೀಡಾರಂಗದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ವಿವಿಧ ಕ್ರೀಡಾ ವಿಭಾಗಗಳಲ್ಲಿ ಮಿಂಚಿದ ಶಾಲೆಯ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳು ಮುಂಬರುವ ರಾಜ್ಯಮಟ್ಟದ ಸ್ಪರ್ಧೆಗಳಿಗೆ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ತನಿಷ್ಕ್ ಇಂಗಳೆ ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿಯ 68 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ. 9ನೇ ತರಗತಿಯ ಅಸ್ಮಿ ಪಾಟೀಲ್ ಕರಾಟೆಯ 32 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟದ ಚಾಂಪಿಯನ್ಷಿಪ್ಗೆ ಆಯ್ಕೆಯಾಗಿದ್ದಾರೆ. ಹಾಗೆಯೇ, ವಿಭಾಗೀಯ ಮಟ್ಟದಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿದ 9ನೇ ತರಗತಿಯ ಕ್ರಿಕೆಟರ್ ವರುಣ್ ಕಮ್ಮಾರ್ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಪ್ರಸಾದ್ ಪೀಟರ್, ಪ್ರಾಂಶುಪಾಲ ರಾಘವೇಂದ್ರ ಹೊನ್ನಾವರ ಹಾಗೂ ಆಡಳಿತ ಮಂಡಳಿ ಶುಭ ಹಾರೈಸಿದೆ.
