ಮುಖ್ಯಮಂತ್ರಿಗಳನ್ನು ರಾಜಕೀಯವಾಗಿ ಟ್ರ್ಯಾಫ್ ವ್ಯವಸ್ಥಿತ ಹಾಗೂ ಸಕ್ರಿಯ ಯತ್ನ ನಡೆಯುತ್ತಿದ್ದು, ಈ ಕುರಿತು ಸ್ಪಷ್ಟ ಸಾಕ್ಷ್ಯಗಳು ಮತ್ತು ಫೋಟೋಗಳು ಲಭ್ಯವಿವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರದ ಇಮೇಜ್ ಕೆಡಿಸಲು ವಿರೋಧ ಪಕ್ಷಗಳು ಈ ಸಂಚು ರೂಪಿಸಿವೆ ಎಂದಿರುವ ಅವರು, ಖಾಸಗಿ ಸಂಸ್ಥೆಗಳ ಮೂಲಕ ಸ್ಟಿಂಗ್ ಆಪರೇಷನ್‌ಗಳು ನಡೆಯುತ್ತಿದ್ದು, ಸಚಿವರು ಹಾಗೂ ನಾಯಕರು ಅತ್ಯಂತ ಎಚ್ಚರಿಕೆಯಿಂದ ಇರಬೇಕಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಮುಖ್ಯಮಂತ್ರಿಗಳನ್ನು ಗುರಿಯಾಗಿಸಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಲು ಕೆಲವರು ಸಕ್ರಿಯವಾಗಿ ಯತ್ನಿಸುತ್ತಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲೂ ಈ ಕುರಿತು ಗಂಭೀರ ಚರ್ಚೆ ನಡೆದಿದ್ದು, ಸರ್ಕಾರದ ಹೆಸರಿಗೆ ಮಸಿ ಬಳಿಯಲು ವಿರೋಧ ಪಕ್ಷಗಳು ಈ ರೀತಿಯ ಷಡ್ಯಂತ್ರಗಳನ್ನು ರೂಪಿಸುತ್ತಿವೆ ಎಂಬುದನ್ನು ಸ್ವತಃ ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ. ಸಚಿವ ಸಂಪುಟದ ಸಭೆಯ ಬಳಿಕ ಸರ್ಕಾರದ ಹಲವು ಸಚಿವರು ಈ ಬಗ್ಗೆ ಧ್ವನಿ ಎತ್ತಿದ್ದು, ರಾಜಕೀಯದಲ್ಲಿ ಇಂತಹ ಷಡ್ಯಂತ್ರಗಳು ಸಹಜವಾದರೂ ನಾಯಕರು ಮತ್ತು ಸಚಿವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾದ ತುರ್ತು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರಿ ಸಂಸ್ಥೆಗಳ ಬದಲು ಖಾಸಗಿ ಸಂಸ್ಥೆಗಳು ಸ್ಟಿಂಗ್ ಆಪರೇಷನ್ ನಡೆಸಲು ಬರುತ್ತಿರುವ ಬಗ್ಗೆ ಮಾಹಿತಿ ಲಭ್ಯವಿದೆ ಎಂದಿರುವ ಅವರು, ಇಡಿ (ED) ದಾಳಿಗಳು ಹಾಗೂ ಕಿರುಕುಳದ ತಂತ್ರಗಳು ಕೂಡ ನಾಯಕರ ವಿರುದ್ಧದ ವ್ಯಾಪಕ ರಾಜಕೀಯ ತಂತ್ರಗಾರಿಕೆಯ ಭಾಗವಾಗಿವೆ ಎಂದು ಕಿಡಿಕಾರಿದ್ದಾರೆ. ಇನ್ನು “ಹಣವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ” ಎಂದಿದ್ದಾರೆಂಬ ಸಿಎಂ ಹೇಳಿಕೆಯ ಟೀಕೆಗೆ ಯಾವುದೇ ತಪ್ಪು ಮಾಡದ ಮುಗ್ಧ ವ್ಯಕ್ತಿಗಳು ಅನಗತ್ಯವಾಗಿ ಸುಳ್ಳು ಪ್ರಕರಣಗಳಲ್ಲಿ ಬಲಿಪಶುವಾಗಬಾರದು ಎನ್ನುವುದೇ ಸಿಎಂ ಅವರ ಆ ಮಾತಿನ ಮೂಲ ಉದ್ದೇಶವಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.
