ಗುರುವಿನ ಕೃಪೆ ಮತ್ತು ಮಾರ್ಗದರ್ಶನ ಇದ್ದರೆ ಸಾಮಾನ್ಯ ವ್ಯಕ್ತಿಯೂ ಅಸಾಧಾರಣ ಸಾಧನೆ ಮಾಡಲು ಸಾಧ್ಯ. ಗುರು ಬದುಕುವ ದಾರಿಯನ್ನು, ಸಂಸ್ಕಾರವನ್ನು ಮತ್ತು ಸನ್ಮಾರ್ಗವನ್ನು ತೋರುವ ಮಹಾನ್ ಚೇತನ. ಗುರುವಿನ ಕೃಪೆಯ ಜೊತೆಗೆ ಶಿಷ್ಯನಲ್ಲಿ ಶ್ರದ್ಧೆ, ವಿನಯ ಮತ್ತು ಕಠಿಣ ಪರಿಶ್ರಮ ಇದ್ದಾಗ ಯಾವುದೇ ವ್ಯಕ್ತಿ ಮಹಾಪುರುಷನಾಗಬಲ್ಲ ಎಂದು ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಅವರು ಇಂದು ಶಿವಬಸವ ನಗರದ ಕಾರಂಜಿ ಮಠದಲ್ಲಿ 304ನೆಯ ಮಾಸಿಕ ಶಿವಾನುಭವ ಹಾಗೂ ಹಾನಗಲ್ ಕುಮಾರ ಶಿವಯೋಗಿಗಳ 159ನೇ ಜಯಂತಿ ಮಹೋತ್ಸವದ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ಮುಂದುವರೆದು ಮಾತನಾಡಿದ ಶ್ರೀಗಳು ಮಠಾಧೀಶರಾಗುವ ಸಾಧಕರಿಗಾಗಿ ಶಿವಯೋಗ ಮಂದಿರ, ಸಮಾಜ ಸಂಘಟನೆಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಅಂತಹ ಮಹಾನ್ ಸಂಸ್ಥೆಗಳನ್ನು ಸ್ಥಾಪಿಸಿದ ಹಾನಗಲ್ ಗುರು ಕುಮಾರೇಶ್ವರರು, ನಾಡಿನ ಜನತೆಗೆ ಅನ್ನದಾಸೋಹ ಜ್ಞಾನದಾಸೋಹ ಕರುಣಿಸಿದ ನಾಗನೂರು ರುದ್ರಾಕ್ಷಿ ಮಠದ ಡಾ. ಶಿವಬಸವ ಮಹಾಸ್ವಾಮಿಗಳು, ಕೇವಲ 5ನೇ ತರಗತಿ ಕಲಿತರೂ ವಿದ್ವತ್ ಪೂರ್ಣ ಸಾಹಿತ್ಯ ರಚಿಸಿದ ಜಚನಿ ಅಂತಹ ರತ್ನಗಳನ್ನು ಈ ನಾಡಿಗೆ ಪರಿಚಯಿಸಿದರು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹುಕ್ಕೇರಿ ವಿರಕ್ತ ಮಠದ ಶಿವಬಸವ ಮಹಾಸ್ವಾಮಿಗಳು ಹಾನಗಲ್ ಕುಮಾರ ಶಿವಯೋಗಿಗಳ ಜೀವನ, ಸಾಧನೆ, ಸಮಾಜಕ್ಕೆ ನೀಡಿದ ಕೊಡುಗೆ ಸದಾ ಸ್ಮರಣೀಯವಾದುದು. ಕಡುಬಡತನದಲ್ಲಿ ಹುಟ್ಟಿ ಬೆಳೆದು ಶ್ರಮಪಟ್ಟು ಜ್ಞಾನಗಳಿಸಿದ ಶಿವಯೋಗಿಗಳು, ಸಮಾಜದ ಜನರನ್ನು ಸಂಸ್ಕಾರವಂತರನ್ನಾಗಿಸಲು ಸ್ವಾಮಿಗಳಿಗೆ ತರಬೇತಿ ನೀಡುವ ಶಿವಯೋಗ ಮಂದಿರ ಪ್ರಾರಂಭಿಸಿದರು. ವಚನ ಪಿತಾಮಹ ಫ.ಗು. ಹಳಕಟ್ಟಿ ಅವರಿಂದ ವಚನ ಸಾಹಿತ್ಯವನ್ನು ಪರಿಷ್ಕರಿಸುವಂತೆ ಪ್ರೇರಣೆ ನೀಡಿದರು. ಹುಟ್ಟು ಕುರುಡರಾಗಿದ್ದ ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಗೆ ಸಂಗೀತಜ್ಞಾನ ಕಲಿಸಿ ಈ ನಾಡಿನ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ ಸೇವೆ ಮಾಡಲು ಪ್ರೇರೇಪಿಸಿದರು ಎಂದು ಅವರು ಶಿವಯೋಗಿಗಳ ಸಾಧನೆ ಸ್ಮರಿಸಿದರು.
ವಿಶ್ರಾಂತ ಪ್ರಾಚಾರ್ಯ ಡಾ. ಎಂ.ಎಸ್. ಇಂಚಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ, ಡಾ. ಎಮ್. ವಿ. ಮಾನ್ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ 2026 ನೇ ಸಾಲಿನ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪಡೆದ ಯರಗಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕಿರಣ್ ಚೌಗಲಾ ಅವರನ್ನು ಸನ್ಮಾನಿಸಲಾಯಿತು.
ಪ್ರಾರಂಭದಲ್ಲಿ ಪ್ರೊ. ವಿ.ಬಿ. ದೊಡಮನಿ ಸ್ವಾಗತಿಸಿದರು. ಕಾರಂಜಿ ಮಠದ ಕುಮಾರೇಶ್ವರ ಪಾಠಶಾಲೆಯ ಮಕ್ಕಳು ಪ್ರಾರ್ಥಿಸಿದರು. ಪ್ರಾಧ್ಯಾಪಕ ಎ.ಕೆ. ಪಾಟೀಲ ನಿರೂಪಿಸಿದರು. ಕೊನೆಗೆ ನ್ಯಾಯವಾದಿ ವಿ.ಕೆ. ಪಾಟೀಲ ವಂದಿಸಿದರು.
