ಗುಮ್ಮಟನಗರಿ ವಿಜಯಪುರದಲ್ಲಿ ಮತದಾರರ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ಸುತ್ತ ದೊಡ್ಡ ವಿವಾದವೇ ಸೃಷ್ಟಿಯಾಗಿದೆ. ಮತದಾರರ ಪಟ್ಟಿಯಲ್ಲಿ ಸತ್ತು ಹೋದವರ ಹೆಸರುಗಳು ಇಂದಿಗೂ ಜೀವಂತವಾಗಿವೆ ಎಂದು ನಗರ ಶಾಸಕ ಯತ್ನಾಳ ಆರೋಪಿಸಿ ದಾಖಲೆ ಬಿಡುಗಡೆ ಮಾಡಿದ್ದಾರೆ. ಇದರ ಮದ್ಯೆ ನಾವು ಯಾರು ಮೃತ ಪಟ್ಟಿಲ್ಲ ಸುಳ್ಳು ಆರೋಪ ಶಾಸಕ ಯತ್ನಾಳ ಮಾಡುತ್ತಿದ್ದಾರೆ, ನಮ್ಮ ಮರಣ ಪ್ರಮಣ ಪತ್ರ ಸುಳ್ಳು ಕೊಟ್ಟವರ ವಿರುದ್ಧ ಕ್ರಮ ಜರುಗಿಸಿ ಎಂದು ಡಿಸಿ ಗೆ ಮನವಿ ಮಾಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಎಸ್ ಐ ಆರ್ ರಾಜಕೀಯ ಜಟಾಪಟಿ ತೀವ್ರಗೊಂಡಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ…

ವಿಜಯಪುರ ನಗರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂಬಂಧಪಟ್ಟಂತೆ ಸೆಪ್ಟೆಂಬರ್ 28 ರಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಸುದ್ದಿಗೋಷ್ಠಿ ಮಾಡಿ ಆಕ್ಷೇಪಣಾ ಅರ್ಜಿ ಸಲ್ಲಿಸಿದವರು ವಿರುದ್ಧ ಆರೋಪ ಮಾಡಿದ್ದರು. ಸುಳ್ಳು ಅರ್ಜಿ ಸಲ್ಲಿಸಿದರು ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸುತ್ತೇನೆ ಎಂದು ಹೇಳಿದರು. ಅಷ್ಟೇ ಅಲ್ದೆ ಸುಳ್ಳು ಆಕ್ಷೇಪಣ ಅರ್ಜಿ ಸಲ್ಲಿಸಿದರು ವಾಪಸ್ ಪಡೆದಿದ್ದಾರೆ ಎಂದು ಹೇಳಿದರು. ಸಚಿವ ಎಂ ಬಿ ಪಾಟೀಲ್ ಸುದ್ದಿಗೋಷ್ಠಿ ಮಾಡಿದ ನಂತರ ವಿಜಯಪುರ ನಗರ ಶಾಸಕ ಸುದ್ದಿಗೋಷ್ಠಿ ಮಾಡಿ ಮರಣ ಹೊಂದಿದವರ ಡೆತ್ ಸರ್ಟಿಫಿಕೇಟ್ ಹಾಗೂ ಮತದಾರರ ಜಾತಿಯಲ್ಲಿ ಅವರ ಹೆಸರಿರುವುದನ್ನು ದಾಖಲೆ ಬಿಡುಗಡೆ ಮಾಡಿದ್ದಾರೆ. ಇದರಿಂದ ವಿಜಯಪುರ ನಗರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ಹೆಸರಿನಲ್ಲಿ ಭಾರೀ ಅಕ್ರಮ ನಡೆದಿದೆಯಾ ಅನ್ನೋ ದೊಡ್ಡ ಮಟ್ಟದ ಅನುಮಾನ ವ್ಯಕ್ತವಾಯಿತು. ಮತದಾರರ ಪಟ್ಟಿಯಿಂದ ಸತ್ತವರ ಹೆಸರುಗಳನ್ನು ತೆಗೆದು ಹಾಕಬೇಕಿದ್ದ ಅಧಿಕಾರಿಗಳು ಹಾಗೂ ಬಿಎಲ್ಒ (BLO) ಗಳು, ಅವರ ಹೆಸರುಗಳನ್ನು ಹಾಗೆಯೇ ಉಳಿಸಿ ಕೊಂಡಿರುವುದು ಬೆಳಕಿಗೆ ಬಂತು. 2019 ರಿಂದ 2026 ರ ನಡುವೆ ಸಾವನ್ನಪ್ಪಿದ ಸುಮಾರು 8,000 ಕ್ಕೂ ಹೆಚ್ಚು ಜನರ ಹೆಸರುಗಳು ಇಂದಿಗೂ ವೋಟರ್ ಲಿಸ್ಟ್ನಲ್ಲಿದ್ದು, ಬೋಗಸ್ ಮತದಾನಕ್ಕೆ ತಯಾರಿ ನಡೆದಿದೆಯಾ ಎಂಬ ವಿಚಾರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸತ್ತವರ ಮರಣ ಪ್ರಮಾಣ ಪತ್ರ ಹಾಗೂ ಮತದಾರರ ಪಟ್ಟಿಯ ಪ್ರತಿಗಳನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದರು…
ಇನ್ನೂ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೀವಂತ ಮತದಾರರನ್ನು ಮೃತಪಟ್ಟಿದ್ದಾರೆಂದು ತೋರಿಸಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದು ಹಾಕಲು ನಕಲಿ ಮರಣ ಪ್ರಮಾಣ ಪತ್ರಗಳನ್ನು ಬಳಸಲಾಗಿದೆ ಎಂಬ ಆರೋಪದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ನೇತೃತ್ವದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಲೆಟರ್ ಹೆಡ್ನಲ್ಲಿ ಕೆಲವು ಮತದಾರರು ಮೃತಪಟ್ಟಿದ್ದಾರೆಂದು ಉಲ್ಲೇಖಿಸಿ ದಾಖಲೆಗಳನ್ನು ಸಲ್ಲಿಸಲಾಗಿದ್ದು, ಅವುಗಳ ಆಧಾರದ ಮೇಲೆ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುವ ಪ್ರಕ್ರಿಯೆ ನಡೆದಿದೆ ಎಂದು ಆರೋಪಿಸಿದರು. ಎಂಟು ಮತದಾರರು ಮೃತಪಟ್ಟಿದ್ದಾರೆಂದು ಪಟ್ಟಿ ಸಲ್ಲಿಸಲಾಗಿದ್ದು, ಏಳು ಮಂದಿಗೆ ಸಂಬಂಧಿಸಿದ ಮರಣ ಪ್ರಮಾಣಪತ್ರಗಳ ಪ್ರತಿಗಳನ್ನು ಕೂಡ ನೀಡಲಾಗಿದೆ. ಸ್ಥಳೀಯವಾಗಿ ಪರಿಶೀಲಿಸಿದಾಗ, ಆ ಏಳು ಮತದಾರರು ಜೀವಂತವಾಗಿರುವುದು ಕಂಡು ಬಂದಿದೆ. ಮರಣ ಪ್ರಮಾಣ ಪತ್ರಗಳು ನೈಜವಾಗಿವೆಯೇ, ಅವುಗಳನ್ನು ಯಾವ ದಾಖಲೆಗಳ ಆಧಾರದ ಮೇಲೆ ನೀಡಲಾಗಿದೆ ಹಾಗೂ ಮತದಾರರ ಹೆಸರುಗಳನ್ನು ತೆಗೆದು ಹಾಕುವ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಸ್ವತಂತ್ರವಾಗಿ ಪರಿಶೀಲಿಸಬೇಕು. ವಿಜಯಪುರ ನಗರ ಮತಕ್ಷೇತ್ರದ 198 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಸುಮಾರು 1046 ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನು ಮೃತಪಟ್ಟಿದ್ದಾರೆಂದು ತೋರಿಸಿ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿದರು…
ಒಟ್ಟಿನಲ್ಲಿ ವಿಜಯಪುರ ನಗರ ಮತ ಕ್ಷೇತ್ರದಲ್ಲಿ ಎಸ್ ಐಆರ್ ಪ್ರಕ್ರಿಯೆ ಫಾರ್ಮ್ ನಂಬರ್ -7ರ ಜಟಾಪಟಿ ನಡೆದು ರಾಜಕೀಯ ಪಕ್ಷದ ನಾಯಕರು ಕೆಸರೆರ ಚಾಟ ಚುನಾವಣೆಗೂ ಮುನ್ನವೇ ಜೋರಾಗಿದೆ. ಇದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಎಂಬುದು ಕಾದು ನೋಡಬೇಕಾಗಿದೆ…
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
