Belagavi

SIR-FIR; ಡಾ. ರವಿ ಪಾಟೀಲ್ ವಿಚಾರಣೆ ಪೂರ್ಣ

Share

ಬೆಳಗಾವಿಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಎಸ್‌ಐಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರ ನೋಟಿಸ್‌ಗೆ ಸ್ಪಂದಿಸಿರುವ ಬಿಜೆಪಿ ಮುಖಂಡ ಡಾ. ರವಿ ಪಾಟೀಲ್ ಅವರು ಇಂದು ಮಾರ್ಕೆಟ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ಸಿಪಿಐ ಜಿ.ಎಂ. ಕಾಲಿಮಿರ್ಚಿ ಅವರ ಮುಂದೆ ವಿಚಾರಣೆ ಎದುರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾನು ಕಾನೂನು ಪ್ರಕಾರವೇ ಆಕ್ಷೇಪಣೆ ಸಲ್ಲಿಸಿದ್ದು, ಮತದಾರರ ಹೆಸರು ಅಳಿಸುವ ಅಧಿಕಾರ ತಮಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯ ಮಾರ್ಕೆಟ್ ಠಾಣೆಯಲ್ಲಿ ದಾಖಲಾಗಿರುವ ಎಸ್‌ಐಆರ್ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಇದರ ಭಾಗವಾಗಿ ಇಂದು ಬಿಜೆಪಿ ಮುಖಂಡ ಡಾ. ರವಿ ಪಾಟೀಲ್ ಅವರು ಠಾಣೆಗೆ ಆಗಮಿಸಿ ತನಿಖಾಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು. ಈಗಾಗಲೇ ಡಾ. ರವಿ ಪಾಟೀಲ್ ಅವರ ಆಸ್ಪತ್ರೆಯ ಸಿಬ್ಬಂದಿಯನ್ನು ವಿಚಾರಣೆ ನಡೆಸಿ ಮಹತ್ವದ ಮಾಹಿತಿ ಕಲೆಹಾಕಿರುವ ಪೊಲೀಸರು, ಪ್ರಕರಣದ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಮುಂದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಠಾಣೆಗೆ ಹಾಜರಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡಿರುವುದಾಗಿ ಹಾಗೂ ಘಟನೆಗೆ ಸಂಬಂಧಿಸಿದ ಸತ್ಯಾಂಶವನ್ನು ಅಧಿಕಾರಿಗಳ ಮುಂದೆ ತಿಳಿಸಿರುವುದಾಗಿ ಡಾ. ರವಿ ಪಾಟೀಲ್ ಸ್ಪಷ್ಟಪಡಿಸಿದರು.

ಪೊಲೀಸ್ ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ರವಿ ಪಾಟೀಲ್, ತಾವು ಕೇವಲ ಫಾರ್ಮ್ ನಂಬರ್ 7ರ ಮೂಲಕ ಆಕ್ಷೇಪಣೆ ಮಾತ್ರ ಸಲ್ಲಿಸಿದ್ದು, ವೋಟರ್ಸ್‌ಗಳ ಹೆಸರು ಡಿಲೀಟ್ ಮಾಡುವ ಅಧಿಕಾರ ತಮಗಿಲ್ಲ ಎಂದರು. ಬಿ.ಎಲ್.ಒ. ಅಥವಾ ಸಂಬಂಧಪಟ್ಟ ಅಧಿಕಾರಿಗಳೇ ಮತ್ತೊಮ್ಮೆ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು. ನಿರ್ದಿಷ್ಟ ಸಮುದಾಯದ ಮತದಾರರನ್ನು ಗುರಿಯಾಗಿಸಿ ಹೆಸರುಗಳನ್ನು ಡಿಲೀಟ್ ಮಾಡಲಾಗುತ್ತಿದೆ ಎಂಬ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಅವರು, ಯಾವ ಬೂತ್‌ಗಳ ಬಗ್ಗೆ ಅನುಮಾನವಿತ್ತೋ ಅಲ್ಲಿ ಪಕ್ಷದ ಎಲ್ಲರೂ ಸೇರಿ ಚರ್ಚಿಸಿ ನಿರ್ಣಯ ಕೈಗೊಂಡು ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ತಮ್ಮ ಮೇಲೆ ಗಲಭೆ ಸೃಷ್ಟಿಸಲು ಯತ್ನ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ತಂದ ಆರೋಪದಡಿ ಎಫ್‌ಐಆರ್ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿ, ತಾವು ಅಂತಹ ಯಾವುದೇ ಕೃತ್ಯ ಎಸಗಿಲ್ಲವೆಂದರು. ಬೆಳಗಾವಿಯ ಶಾಂತಿ ಮತ್ತು ದೇಶದ ಹಿತಕ್ಕಾಗಿ ಕೆಲಸ ಮಾಡುವವರೇ ಹೊರತು ಅಂತಹ ಕೆಲಸ ಮಾಡುವುದಿಲ್ಲವೆಂದ ಅವರು, ತಾವು ಯಾವುದೇ ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿಲ್ಲ ಎಂದರು. ವೀರಭದ್ರನಗರದಲ್ಲಿ ಅರ್ಜಿ ಸಲ್ಲಿಸುವಾಗ ನಮ್ಮ ಪಕ್ಷದ ಕಾರ್ಯಕರ್ತರೇ ಇದ್ದರೇ ಹೊರತು ಆಸ್ಪತ್ರೆಯ ಸಿಬ್ಬಂದಿಗಳಲ್ಲ ಎಂದು ತಿಳಿಸಿದ ಅವರು, ಈ ಬಗ್ಗೆ ಪಕ್ಷದ ಹಿರಿಯರಾದ ಅಭಯ್ ಪಾಟೀಲ್, ಅನಿಲ್ ಬೆನಕೆ ಹಾಗೂ ಗೀತಾ ಸುತಾರ್ ಈಗಾಗಲೇ ವಿವರಣೆ ನೀಡಿದ್ದಾರೆಂದೂ, ತಾವೂ ಕೂಡ ಶೀಘ್ರವೇ ಪ್ರೆಸ್ ಮೀಟ್ ಕರೆದು ಸಮಗ್ರ ವಿವರಗಳನ್ನು ನೀಡುವುದಾಗಿ ತಿಳಿಸಿದರು.

Tags:

error: Content is protected !!