ಚೋರ್ಲಾ ಘಾಟ್ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಳಗಾವಿಯ ವಡಗಾಂವ್ ನಿವಾಸಿ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ವರದಿಯಾಗಿದೆ.
ಗೋವಾದಿಂದ ಬರುತ್ತಿದ್ದ ಕಾರಿಗೆ ಡಂಪರ್ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪೊಲೀಸರು ಮತ್ತು ರಕ್ಷಣಾ ತಂಡವು ಹರಸಾಹಸಪಟ್ಟು ಮೃತದೇಹವನ್ನು ಹೊರತೆಗೆದಿದೆ.
ಚೋರ್ಲಾ ಘಾಟ್ನ ಡೆಲ್ಟಾ ರಿಸಾರ್ಟ್ ಸಮೀಪ ಗೋವಾದಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ಕಾರಿಗೆ ಎದುರಿನಿಂದ ಬಂದ ಡಂಪರ್ ಮುಖಾಮುಖಿ ಭೀಕರ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಆನಂದನಗರ ವಡಗಾಂವ್ ನಿವಾಸಿ ಶ್ಯಾಮ್ ಅಲಿಯಾಸ್ ರವಳನಾಥ ತುಳಜಾಯಿ (42) ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೃತದೇಹ ವಾಹನದೊಳಗೆ ಸಿಲುಕಿಕೊಂಡಿತ್ತು. ಆರಂಭದಲ್ಲಿ ಕಾರಿನಲ್ಲಿ ಇನ್ನುಳಿದವರು ಇದ್ದಾರೆಯೇ ಎಂಬ ಸಂಶಯವಿತ್ತಾದರೂ, ರಕ್ಷಣಾ ಕಾರ್ಯಾಚರಣೆಯ ಬಳಿಕ ಅವರು ಒಬ್ಬರೇ ಪ್ರಯಾಣಿಸುತ್ತಿದ್ದರು ಎಂಬುದು ಸ್ಪಷ್ಟವಾಯಿತು.
ಅಪಘಾತದ ಮಾಹಿತಿ ತಿಳಿದ ಕೂಡಲೇ ಖಾನಾಪೂರ ಪೊಲೀಸರು ಹಾಗೂ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತು. ಕಾರು ತೀವ್ರವಾಗಿ ಜಖಂಗೊಂಡಿದ್ದರಿಂದ ಸ್ಥಳಕ್ಕೆ ಕಟ್ಟರ್ ತರಿಸಿ, ವಾಹನದ ಭಾಗವನ್ನು ಕತ್ತರಿಸಿ ಮೃತದೇಹವನ್ನು ಹೊರತೆಗೆಯಲಾಯಿತು. ತದನಂತರ ಮೃತದೇಹವನ್ನು ಖಾನಾಪೂರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಈ ಘಟನೆಗೆ ಸಂಬಂಧಿಸಿದಂತೆ ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.
