Belagavi

ಚುನಾವಣಾ ಆಯೋಗದ ವಿರುದ್ಧ ಬೆಳಗಾವಿಯಲ್ಲಿ ಎಸ್.ಡಿ.ಪಿ.ಐ ಬೃಹತ್ ಪ್ರತಿಭಟನೆ

Share

ಬೆಳಗಾವಿಯಲ್ಲಿ ಅಲ್ಪಸಂಖ್ಯಾತ ಮತದಾರರ ಪಟ್ಟಿಯಿಂದ ಹೆಸರು ಕಡಿತಗೊಳಿಸಿರುವ ಆರೋಪದ ಹಿನ್ನೆಲೆಯಲ್ಲಿ ಎಸ್.ಡಿ.ಪಿ.ಐ ಪಕ್ಷದ ವತಿಯಿಂದ ಇಂದು ತೀವ್ರ ಪ್ರತಿಭಟನೆ ನಡೆದಿದೆ. ಚುನಾವಣಾ ಆಯೋಗ ಮತ್ತು ಬಿ.ಎಲ್.ಒಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು ಎಸ್.ಡಿ.ಪಿ.ಐ ಸಂಘಟನೆಯ ವತಿಯಿಂದ ಚುನಾವಣಾ ಆಯೋಗದ ಕ್ರಮಗಳನ್ನು ವಿರೋಧಿಸಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸಲಾಯಿತು. ನಂತರ ಈ ಕುರಿತಾದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ವಿಶ್ವಕ್ಕೆ ಮಾದರಿಯಾದ ಭಾರತೀಯ ಸಂವಿಧಾನದ ನಿಯಮಗಳನ್ನು ಮೀರಿ ಚುನಾವಣಾ ಆಯೋಗ ವರ್ತಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಮುಖ್ಯ ಚುನಾವಣಾ ಆಯುಕ್ತರು ರಾಜಕೀಯ ಪಕ್ಷವೊಂದರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಹಾಗೂ ಲಕ್ಷಾಂತರ ಜನರ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲಾಗುತ್ತಿದೆ ಎಂದು ದೂರಿದರು.

ಮತದಾರರ ಪಟ್ಟಿಯಿಂದ ನಿರ್ದಿಷ್ಟ ಸಮುದಾಯ ಹಾಗೂ ಅಲ್ಪಸಂಖ್ಯಾತರ ಹೆಸರುಗಳನ್ನು ಕಾನೂನುಬಾಹಿರವಾಗಿ ಕೈಬಿಡಲು ಮುದ್ರಿತ ಫಾರ್ಮ್ 7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಎಸ್‌ಡಿಪಿಐ ಮುಖಂಡರು ಗಂಭೀರ ಆರೋಪ ಮಾಡಿದರು. ಅಕ್ರಮವಾಗಿ ಸಹಿ ಮಾಡಿದ ಬೆಳಗಾವಿಯ ಬಿ.ಎಲ್.ಒ (BLO) ಅವರನ್ನು ಕೂಡಲೇ ಅಮಾನತ್ತು ಮಾಡಬೇಕು ಮತ್ತು ಈ ಸಂಚಿನಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್.ಡಿ.ಪಿ.ಐ ಕಾರ್ಯಕರ್ತರು ಭಾಗಿಯಾಗಿದ್ಧರು.

Tags:

error: Content is protected !!