Chikkodi

ರೈತರ ಹಿತ ಕಾಯುವ ದೃಷ್ಟಿಯಿಂದ ಸಾಲದ ಮಿತಿ ಮತ್ತಷ್ಟು ಹೆಚ್ಚಳ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ

Share

ಚಿಕ್ಕೋಡಿ:ಜಿಲ್ಲೆಯ ರೈತರಿಗೆ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ (ಡಿಸಿಸಿ) ಬ್ಯಾಂಕ್ ವತಿಯಿಂದ ನೀಡಲಾಗುವ ಸಾಲದ ಸೌಲಭ್ಯಗಳು ಹಾಗೂ ಮಿತಿಯನ್ನು ಹಂತ-ಹಂತವಾಗಿ ಹೆಚ್ಚಿಸಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.

ಚಿಕ್ಕೋಡಿ ತಾಲೂಕಿನ ಜೈನಾಪುರದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ, ಪತ್ತ ವಿತರಿಸಿ ಮಾತನಾಡಿದ ಅವರು, ರೈತರ ಹಿತದೃಷ್ಟಿಯಿಂದ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದರು.

ಈ ಹಿಂದೆ ರೂ. 40,000 ಇದ್ದ ಶೂನ್ಯ ಶೇಕಡಾ (0%) ಬಡ್ಡಿ ದರದ ಸಾಲದ ಮಿತಿಯನ್ನು ಸಾಮಾನ್ಯ ಸಭೆಯಲ್ಲಿ ರೂ. 50,000 ಕ್ಕೆ ಏರಿಸಲಾಗಿದೆ.ರೈತ ಮುಖಂಡರು ಮತ್ತು ಸಂಘಟನೆಗಳ ಬೇಡಿಕೆಯಂತೆ ಎಕರೆಗೆ ರೂ. 50,000 ದಂತೆ ಗರಿಷ್ಠ ಸಾಲದ ಮಿತಿಯನ್ನು ರೂ. 3 ಲಕ್ಷದಿಂದ ರೂ. 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ 120 ಡಿಸಿಸಿ ಬ್ಯಾಂಕ್ ಶಾಖೆಗಳಿದ್ದು, ಶೇ. 90 ರಷ್ಟು ಹಳ್ಳಿಗಳಿಗೆ ನೇರ ಬ್ಯಾಂಕ್ ತಲುಪಲು ಆರ್‌ಬಿಐ ನಿಯಮಾವಳಿಗಳ ತೊಡಕಿದೆ. ಇದನ್ನು ನೀಗಿಸಲು, ಉತ್ತಮವಾಗಿ ಕಾರ್ಯನಿರ್ವಹಿಸುವ ಪ್ರಾಥಮಿಕ ಸಹಕಾರ ಸಂಘಗಳನ್ನು (ಸೊಸೈಟಿ) ಬ್ಯಾಂಕ್ ಶಾಖೆಗಳಂತೆ ಪರಿಗಣಿಸಿ, ಅವುಗಳ ಮುಖಾಂತರವೇ ಮೋಟಾರ್ ಸೈಕಲ್, ಕಾರು, ಮನೆ ನಿರ್ಮಾಣ ಮುಂತಾದ ಸಾಲಗಳನ್ನು ಡಿಸಿಸಿ ಬ್ಯಾಂಕ್ ದರದಲ್ಲೇ ವಿತರಿಸುವ ನೂತನ ಯೋಜನೆ ಜಾರಿಗೆ ತರಲಾಗಿದೆ ಎಂದು ಜೊಲ್ಲೆಯವರು ಸ್ಪಷ್ಟಪಡಿಸಿದರು.

ಸಂಘದ ಅಧ್ಯಕ್ಷ ಪ್ರಕಾಶ ಪಾಟೀಲ ಮಾತನಾಡಿ ಪ್ರಕಾಶ ಹುಕ್ಕೇರಿಯವರ ಅನುದಾನದ 22 ಲಕ್ಷ ರೂಪಾಯಿ ವೆಚ್ಚದಲ್ಲಿ ಸಭಾಭವನ ಹಾಗೂ ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ. 7 ಕೋಟಿಗೂ ಹೆಚ್ಚು ಪತ್ತ ಮಂಜೂರು ಮಾಡಿ, ಹಲವು ಉಪಯುಕ್ತ ಯೋಜನೆಗಳನ್ನು ರೂಪಿಸಿರುವ ಅಣ್ಣಾಸಾಹೇಬ ಜೊಲ್ಲೆಯವರಿಗೆ ಹಾಗೂ ಸಂಘದ ಏಳಿಗೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಶಾಸಕ ದುರ್ಯೋಧನ ಐಹೊಳೆ ಮಾತನಾಡಿ ಈ ವರ್ಷ 8 ಕೋಟಿ ಪತ್ತ ಮಂಜೂರು ಮಾಡಿರುವ ಜೊಲ್ಲೆಯವರ ಕಾರ್ಯ ರೈತ ಬಾಂಧವರಿಗೆ ಅತ್ಯಂತ ಅನುಕೂಲಕರವಾಗಿದೆ ಎಂದರು.

ಚಿಂಚಣಿಯ ಶಿವಪ್ರಸಾದ ದೇವರು ಮಾತನಾಡಿ ನೂರು ವರ್ಷ ಪೂರೈಸಿರುವ ಈ ಸಂಘವು ಪ್ರಕಾಶ ಪಾಟೀಲರ ಒಳ್ಳೆಯ ಕಾರ್ಯದಿಂದಾಗಿ 8 ಕೋಟಿ ಸಾಲ ಮಂಜೂರಾತಿ ಪಡೆದಿದೆ. ಅನ್ನ ನೀಡುವ ರೈತರು ಎದೆಗುಂದಬಾರದು, ಸಾಲದ ಮಿತಿ ಹೆಚ್ಚಳದಿಂದ ರೈತರಿಗೆ ಒಳಿತಾಗಲಿದೆ ಎಂದು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ತಾಲೂಕು ನಿಯಂತ್ರಣಾಧಿಕಾರಿ ಶ್ರೀ ಬಿ. ಎಸ್. ಗುಡಿಸಿ, ಬಿ.ಡಿ.ಸಿ.ಸಿ. ಬ್ಯಾಂಕ್ ನಿರೀಕ್ಷಕ ಶ್ರೀ ರಾಜು ಮುನ್ನೋಳಿ, ಸಂಘದ ಉಪಾಧ್ಯಕ್ಷರಾದ ಬಸವರಾಜ ಲಕ್ಷ್ಮಣ ಮಾಳಗೆ, ನಿರ್ದೇಶಕರಾದ ಈರಪ್ಪಾ ನಾಗಪ್ಪ ಮಂಗಾಜ, ಬಾಬಾಸಾಬ ಪರಪ್ಪ ಘರಬುಡೆ, ದುಂಡಪ್ಪ ಬಸಪ್ಪ ಘರಬುಡೆ, ಅಶೋಕ ನಾಗಪ್ಪ ಖಾಡ, ಈರಗೌಡ ಬಾಳಗೌಡ ಸೊಲಬನ್ನರ, ಅಶೋಕ ಕಲ್ಲಪ್ಪ ನಿಂಗನೂರೆ, ಶ್ರೀಮತಿ ಶಶಿಕಲಾ ಮಹಾದೇವ ಭಾಕರೆ, ಶ್ರೀಮತಿ ಅವಕ್ಕಾ ಕೃಷ್ಣಪ್ಪ ಜೋಗೆ ಹಾಗೂ ಬಿಡಿಸಿಸಿ ನಾಮನಿರ್ದೇಶಕರಾದ ಪ್ರಕಾಶ ಈ. ಟೋಪುಗೋಳ,ಎಪಿಎಂಸಿ ಉಪಾಧ್ಯಕ್ಷ ಈರಗೌಡ ಕೆಳಗಿಮನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Tags:

error: Content is protected !!