ಬೆಳಗಾವಿ ಜಿಲ್ಲೆಯ ಐತಿಹಾಸಿಕ ಹಾಗೂ ಸಾಂಸ್ಕೃತಿಕ ತಾಣಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ. ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯ ಪರಂಪರೆಯನ್ನು ವಿಶ್ವದ್ಯಾಂತ ಪಸರಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ ಎಂದರು.



ಬೆಳಗಾವಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಜಿಲ್ಲಾಧಿಕಾರಿ ಮೊಹ್ಮದ್ ರೋಷನ್, ಹಿರಿಯ ಅಂಚೆ ಅಧೀಕ್ಷಕ ಆರುಷಿ ಶರ್ಮಾ, ಪ್ರವಾಸೋದ್ಯಮ ಉಪನಿರ್ದೇಶಕ ರೋಹಿತ್ ಸಿಂಗ್ ಹಾಗೂ ಜಂಟಿ ನಿರ್ದೇಶಕಿ ಗೀತಾ ಕೌಲಗಿ ಸೇರಿದಂತೆ ಮುಖಂಡರು ಜ್ಯೋತಿ ಬೆಳಗಿಸಿ, ಪ್ರವಾಸೋದ್ಯಮ ಕೈಪಿಡಿಯನ್ನು ಲೋಕಾರ್ಪಣೆಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಬೆಳಗಾವಿಯ ಪಟವರ್ಧನ ಮಹಡಿಗಳು, ಐತಿಹಾಸಿಕ ಮಸೀದಿಗಳು ಮತ್ತು ರಾಜಹಂಸಗಢ ಕೋಟೆಯಂತಹ ಪ್ರಮುಖ ಐತಿಹಾಸಿಕ ತಾಣಗಳು ಕೇವಲ ರಾಜ್ಯ ಅಥವಾ ರಾಷ್ಟ್ರಮಟ್ಟಕ್ಕಷ್ಟೇ ಸೀಮಿತವಾಗದೆ ಇಡೀ ವಿಶ್ವಕ್ಕೆ ಪರಿಚಯವಾಗಬೇಕು ಎಂದು ಆಶಿಸಿದರು. ಕಳೆದ ಐದು ವರ್ಷಗಳಿಂದ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಇಂತಹ ಯಾವುದೇ ಬೃಹತ್ ಕಾರ್ಯಕ್ರಮಗಳು ನಡೆಯದ ಕೊರತೆಯನ್ನು ಪ್ರಸ್ತುತ ಅಧಿಕಾರಿಗಳು ಯಶಸ್ವಿಯಾಗಿ ನೀಗಿಸುತ್ತಿದ್ದಾರೆ ಎಂದು ಅವರು ಪ್ರಶಂಸಿಸಿದರು.

ಕೇವಲ ಪ್ರೇಕ್ಷಣೀಯ ಸ್ಥಳಗಳಷ್ಟೇ ಅಲ್ಲದೆ, ಬೆಳಗಾವಿಯ ಹೆಮ್ಮೆಯ ಕುಮಾರ ಗಂಧರ್ವ ಆಡಿಟೋರಿಯಂ ಹಾಗೂ ಧಾರವಾಡ ಘರಾನಾ ಹಿಂದೂಸ್ತಾನಿ ಸಂಗೀತ ಪರಂಪರೆಯ ಮಹತ್ವವನ್ನು ಅವರು ಸಭೆಯಲ್ಲಿ ಸ್ಮರಿಸಿದರು. ಜಿಲ್ಲೆಯ ಕಲೆ, ಸಂಸ್ಕೃತಿ ಮತ್ತು ಪಾಕಪದ್ಧತಿಯನ್ನು ಯುವ ಪೀಳಿಗೆಗೆ ತಲುಪಿಸಲು ಇತ್ತೀಚೆಗೆ ಪರಿಚಯಿಸಲಾಗಿರುವ ಕ್ಯುಆರ್ ಕೋಡ್ ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ವೆಬ್‌ಸೈಟ್ ಅತ್ಯಂತ ಉಪಯುಕ್ತವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರವಾಸೋದ್ಯಮ ಕೈಪಿಡಿ ಬಿಡುಗಡೆ, ಪ್ರವಾಸೋದ್ಯಮ ಸೇವೆಗೆ ಚಾಲನೆ ಮತ್ತು ಉತ್ತಮ ಕೆಲಸ ನಿರ್ವಹಿಸಿ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಮಾಣ ಪತ್ರಗಳನ್ನು ನೀಡಿ ಜಿಲ್ಲಾಧಿಕಾರಿಗಳು ಗೌರವಿಸಿದರು.

