ಸಕ್ಕರೆ ನಾಡು ಬೆಳಗಾವಿಯಲ್ಲಿಂದು ಕರ್ನಾಟಕ ಯುನೈಟೆಡ್ ಶುಗರ್ ವರ್ಕರ್ಸ್ ಫೆಡರೇಶನ್ ವತಿಯಿಂದ ಸಕ್ಕರೆ ಕಾರ್ಮಿಕರ ಬೃಹತ್ ಸಮಾವೇಶ ಹಾಗೂ ಐತಿಹಾಸಿಕ ರ್ಯಾಲಿ ನಡೆಸಲಾಯಿತು. ಕಾರ್ಖಾನೆಗಳಲ್ಲಿ ನಡೆಯುತ್ತಿರುವ ಶೋಷಣೆ ಹಾಗೂ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸಿದರು.


ಬೆಳಗಾವಿಯ ಸರ್ದಾರ್ಸ್ ಮೈದಾನದಿಂದ ಆರಂಭಗೊಂಡ ಸಕ್ಕರೆ ಕಾರ್ಮಿಕರ ಬೃಹತ್ ರ್ಯಾಲಿಯು ಕಾಲೇಜ್ ರಸ್ತೆ ಹಾಗೂ ರಾಣಿ ಚೆನ್ನಮ್ಮ ವೃತ್ತದ ಮಾರ್ಗವಾಗಿ ಸಾಗಿತು. ಮೆರವಣಿಗೆಯು ಉದ್ದಕ್ಕೂ ಸಾವಿರಾರು ಕಾರ್ಮಿಕರು ಸರ್ಕಾರದ ಹಾಗೂ ಕಾರ್ಖಾನೆಗಳ ಧೋರಣೆ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತಾ ಶಕ್ತಿ ಪ್ರದರ್ಶನ ಮಾಡಿದರು.
ಈ ವೇಳೆ ಮಾತನಾಡಿದ ಯುನೈಟೆಡ್ ಶುಗರ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷರಾದ ಅಡಿವಯ್ಯ ಬಸನಗೌಡ ಅವರು, ರಾಜ್ಯದ ಸಕ್ಕರೆ ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ಯಾವುದೇ ಸೂಕ್ತ ನಿಯಮಗಳಾಗಲಿ ಅಥವಾ ರೆಗುಲೇಷನ್ಸ್ ಆಗಲಿ ಇಲ್ಲ ಎಂದು ಕಿಡಿಕಾರಿದರು. ಬಹುತೇಕ ಕಾರ್ಖಾನೆಗಳ ಮಾಲೀಕತ್ವವು ಜನಪ್ರತಿನಿಧಿಗಳಾದ ಶಾಸಕರು, ಸಂಸತ್ತು ಹಾಗೂ ಸಚಿವರ ಕೈಯಲ್ಲಿದ್ದು, ಕಾರ್ಮಿಕ ಇಲಾಖೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಮಿಕರ ಕಾನೂನು ಬದ್ಧ ಜೀವಗಳು ಹಾಗೂ ಶಾಸನಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂದು ಆರೋಪಿಸಿದ ಅಡಿವಯ್ಯ ಬಸನಗೌಡ, ಸರ್ಕಾರದ ಕೆಲ ಕ್ರಮಗಳು ಹಾಗೂ ಕಾರ್ಮಿಕ ವಿರೋಧಿ ಧೋರಣೆಗಳನ್ನು ತೀವ್ರವಾಗಿ ಖಂಡಿಸಿದರು. ಕಾರ್ಮಿಕರ ಜವಾಬ್ದಾರಿಗಿಂತ ಸರ್ಕಾರದ ಜವಾಬ್ದಾರಿ ಹೆಚ್ಚಿದ್ದು, ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿರುವ ಕಾರ್ಮಿಕರಿಗೆ ಕಾನೂನು ಪ್ರಕಾರ ನ್ಯಾಯಯುತ ವೇತನ ಹಾಗೂ ಕನಿಷ್ಠ ಸೌಲಭ್ಯಗಳು ದೊರೆಯಬೇಕು ಎಂಬ ಮಹತ್ವದ ಉದ್ದೇಶದಿಂದ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಫೆಡರೇಶನ್ನ ಪ್ರಧಾನ ಕಾರ್ಯದರ್ಶಿಗಳು ಚಂದ್ರಶೇಖರ್ ಮೇಟಿ ಅವರು ಮಾತನಾಡಿ, ಸಕ್ಕರೆ ಕೈಗಾರಿಕೆಗಳು ಆರ್ಥಿಕವಾಗಿ ಅಪಾರ ಲಾಭ ಗಳಿಸಿ ಪ್ರಬಲವಾಗುತ್ತಿದ್ದರೂ, ಅಲ್ಲಿ ಶ್ರಮಿಸುವ ಕಾರ್ಮಿಕರ ಹಕ್ಕುಗಳು ಮಾತ್ರ ದಿನದಿಂದ ದಿನಕ್ಕೆ ಕುಂಠಿತಗೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಮಿಕರಲ್ಲಿ ಜಾಗೃತಿ ಮೂಡಿಸಿ ಸಂಘಟಿತರನ್ನಾಗಿಸುವುದು ಈ ಸಭೆಯ ಮುಖ್ಯ ಗುರಿಯಾಗಿದ್ದು, ಸಮಾವೇಶದ ನಿರ್ಣಯಗಳನ್ನು ಒಳಗೊಂಡ ಮನವಿ ಪತ್ರವನ್ನು ಸರ್ಕಾರದ ಎಲ್ಲ ಮಂತ್ರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರು. ಒಂದು ವೇಳೆ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಗದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಕಾರ್ಮಿಕರನ್ನು ಒಗ್ಗೂಡಿಸಿ ಬೃಹತ್ ಮಟ್ಟದ ಉಗ್ರ ಹೋರಾಟಕ್ಕೆ ಸಜ್ಜುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಸಕ್ಕರೆ ಕಾರ್ಖಾನೆಯ ಕಾರ್ಮಿಕರು ಭಾಗಿಯಾಗಿದ್ಧರು.
