ಬೆಳಗಾವಿಯ ಅನಗೋಳದ ಸಂತ ಮೀರಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ‘ವಂದೇ ಮಾತರಂ’ ಗೀತೆಯ 150ನೇ ವರ್ಷಾಚರಣೆಯು ‘ನಮಾಮಿ ಭಾರತ’ ವಿಶೇಷ ಪರಿಕಲ್ಪನೆಯೊಂದಿಗೆ ಅತ್ಯಂತ ಉತ್ಸಾಹ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಜರುಗಿತು. ವಿದ್ಯಾರ್ಥಿಗಳ ಏಕಸ್ವರದ ಗಾಯನವು ಇಡೀ ಶಾಲಾ ಆವರಣದಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸಿತು.


ಸಂತ ಮೀರಾ ಇಂಗ್ಲಿಷ್ ಮೀಡಿಯಂ ಶಾಲೆ ಅನಗೋಳದಲ್ಲಿ ‘ವಂದೇ ಮಾತರಂ’ನ 150ನೇ ವರ್ಷಾಚರಣೆಯ ಅಂಗವಾಗಿ ‘ನಮಾಮಿ ಭಾರತ – ಒಂದೇ ಸಮಯ, ಒಂದೇ ಲಯ, ಒಂದೇ ಸ್ವರದೊಂದಿಗೆ ಒಂದಾಗೋಣ’ ಎಂಬ ಪ್ರೇರಣಾದಾಯಕ ಪರಿಕಲ್ಪನೆಯಡಿ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಸೌರಭ ಕುಲಕರ್ಣಿ ಅವರು ಆಗಮಿಸಿದ್ದರು. ಶಾಲೆಯ ಅಧ್ಯಕ್ಷರಾದ ಶ್ರೀ ಪರಮೇಶ್ವರ ಹೆಗಡೆ, ಆಡಳಿತಾಧಿಕಾರಿ ಶ್ರೀ ರಾಘವೇಂದ್ರ ಕುಲಕರ್ಣಿ, ಆಡಳಿತ ಮಂಡಳಿ ಸದಸ್ಯರಾದ ಶ್ರೀ ಕೃಷ್ಣ ಭಟ್ ಹಾಗೂ ಶ್ರೀ ಅಶೋಕ ಶಿಂತ್ರೆ, ಮತ್ತು ಸಹಾಯಕ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಋತುಜಾ ಜಾಧವ್ ಅವರು ದೀಪಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. 1 ರಿಂದ 9ನೇ ತರಗತಿಯ ವಿದ್ಯಾರ್ಥಿಗಳು ‘ವಂದೇ ಮಾತರಂ’ ಗೀತೆಯನ್ನು ಭಾವಪೂರ್ಣವಾಗಿ ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮುಖ್ಯ ಅತಿಥಿ ಶ್ರೀ ಸೌರಭ ಕುಲಕರ್ಣಿ ಅವರು ಮಾತನಾಡಿ, ರಾಷ್ಟ್ರೀಯ ಏಕತೆ ಮತ್ತು ದೇಶಭಕ್ತಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಪಾಲಕರು ಹಾಗೂ ಶಿಕ್ಷಕ ವೃಂದದವರ ಉಪಸ್ಥಿತಿಯಲ್ಲಿ ನಡೆದ ಈ ಸ್ಮರಣೀಯ ಕಾರ್ಯಕ್ರಮವು ಎಲ್ಲರಲ್ಲೂ ಮಾತೃಭೂಮಿಯ ಬಗೆಗಿನ ಅಭಿಮಾನವನ್ನು ಜಾಗೃತಗೊಳಿಸಿತು.

