Belagavi

ಹರಿಪ್ರಸಾದ್ ಆರೋಪಕ್ಕೆ ಅಭಯ್ ಪಾಟೀಲ್ ತಿರುಗೇಟು

Share

ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ 2,500 ಮತಗಳನ್ನು ಡಿಲೀಟ್ ಮಾಡಲು ಪತ್ರ ಬರೆಯಲಾಗಿದೆ ಎಂಬ ಬಿ. ಕೆ. ಹರಿಪ್ರಸಾದ್ ಅವರ ಆರೋಪಕ್ಕೆ ಬಿಜೆಪಿ ಶಾಸಕ ಅಭಯ್ ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಾವು ಯಾವುದೇ ಮತಗಳನ್ನು ನೇರವಾಗಿ ರದ್ದುಗೊಳಿಸಲು ಕೋರಿಲ್ಲ, ಬದಲಾಗಿ ಬಿಎಲ್‌ಒ-2 ಸಲ್ಲಿಸಿದ ಮನವಿಯಂತೆ ನಕಲಿ ಮತದಾರರ ಪರಿಶೀಲನೆ ನಡೆಸಲು ಪತ್ರ ಬರೆದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ನಾಯಕ ಬಿ. ಕೆ. ಹರಿಪ್ರಸಾದ್ ಅವರ ಸುಳ್ಳು ಆರೋಪಗಳಿಗೆ ತಿರುಗೇಟು ನೀಡಿದ ಶಾಸಕ ಅಭಯ್ ಪಾಟೀಲ್, ತಾವು ಶಾಸಕರಾಗಿ ಈ ಪತ್ರ ಬರೆದಿಲ್ಲ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಪಾಲಿಕೆ ಆಯುಕ್ತರಿಗೆ ಕ್ಷೇತ್ರದ ಬಿಎಲ್‌ಎ-1 (Booth Level Agent-1) ಪ್ರತಿನಿಧಿಯಾಗಿ ಪತ್ರ ತಲುಪಿಸಲಾಗಿದೆ. ತಮ್ಮ ಕ್ಷೇತ್ರದ ಬಿಎಲ್‌ಎ-2 ನೀಡಿದ ಮಾಹಿತಿಯನ್ನು ಆಧರಿಸಿ, ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ ಲೋಪದೋಷಗಳು ಹಾಗೂ ನಕಲಿ ಮತದಾರರ ಕುರಿತು ಪರಿಶೀಲನೆ ನಡೆಸುವಂತೆ ಮಾತ್ರ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಅವರು ವಿವರಣೆ ನೀಡಿದರು.

ತಾವು ಯಾವುದೇ ಮತದಾರರ ಹೆಸರನ್ನು ಪಟ್ಟಿಯಿಂದ ನೇರವಾಗಿ ಡಿಲೀಟ್ ಮಾಡಲು ಕೋರಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಕಲಿ ಹಾಗೂ ಮೃತಪಟ್ಟ ಮತದಾರರ ಹೆಸರುಗಳು ಇಂದಿಗೂ ಮತದಾರರ ಪಟ್ಟಿಯಲ್ಲಿ ಉಳಿದುಕೊಂಡಿವೆ ಎಂದು ಗಂಭೀರ ಆರೋಪ ಮಾಡಿದರು. ಬಿಎಲ್‌ಒ-2 ಸಲ್ಲಿಸಿರುವ ಮನವಿಗಳನ್ನು ಅಧಿಕಾರಿಗಳು ಸರಿಯಾಗಿ ಪರಿಶೀಲಿಸಬೇಕು. ಒಂದು ವೇಳೆ ಪರಿಶೀಲನೆಯಲ್ಲಿ ನಕಲಿ ಇರುವುದು ದೃಢಪಟ್ಟರೆ ಮಾತ್ರ ಅಂತಹ ಹೆಸರುಗಳನ್ನು ಕಾನೂನಿನ ಚೌಕಟ್ಟಿನಲ್ಲಿ ರದ್ದುಪಡಿಸಬೇಕೆಂದು ಮನವಿ ಮಾಡಿರುವುದಾಗಿ ತಿಳಿಸಿದರು.

ಬಿ. ಕೆ. ಹರಿಪ್ರಸಾದ್ ಅವರು ಚುನಾವಣಾ ಪ್ರಕ್ರಿಯೆ ತಿಳಿಯದೆ ಹಾಗೂ ಪತ್ರವನ್ನು ಸರಿಯಾಗಿ ಓದದೆ ಪ್ರಚಾರಕ್ಕಾಗಿ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ಅಭಯ್ ಪಾಟೀಲ್ ಟೀಕಿಸಿದರು. ನಮಗೂ ಕಾನೂನು ಹೋರಾಟ ಗೊತ್ತಿದ್ದು, ಯಾವುದೇ ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 29 ರಂದು ದೆಹಲಿಗೆ ತೆರಳಿ, ಶಾಸಕನಾಗಿ ಅಲ್ಲದೆ ಬಿಎಲ್‌ಎ-1 ಆಗಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸುವುದಾಗಿ ಅವರು ಎಚ್ಚರಿಕೆ ನೀಡಿದರು.

Tags:

error: Content is protected !!