ರಾಜ್ಯದಲ್ಲಿ ತೀವ್ರ ಬರಗಾಲದ ಎದುರಾಗಿರುವ ಸವಾಲುಗಳ ಹಾಗೂ ರೈತರ ಸಂಕಷ್ಟದ ಕುರಿತು ವಿಧಾನ ಪರಿಷತ್ನಲ್ಲಿ ಗಂಭೀರ ಚರ್ಚೆ ನಡೆದಿದೆ. ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ಮತ್ತು ನೀರಾವರಿ ಯೋಜನೆಗಳ ವಿಳಂಬದ ಬಗ್ಗೆ ವಿಧಾನ ಪರಿಷತ್ ಸದಸ್ಯ ಎಂ. ನಾಗರಾಜ್ ಯಾದವ್ ಅವರು ಸರ್ಕಾರದ ಗಮನ ಸೆಳೆದಿದ್ದಾರೆ.

ವಿಧಾನ ಪರಿಷತ್ನಲ್ಲಿ ಮಾತನಾಡಿದ ಎಂ ಎಲ್ ಸಿ ಎಂ. ನಾಗರಾಜ್ ಯಾದವ್, ಬರಗಾಲ ಕೇವಲ ರೈತರಿಗಷ್ಟೇ ಅಲ್ಲದೆ, ಇಡೀ ನಾಗರಿಕ ಸಮಾಜದ ಕುಡಿಯುವ ನೀರು ಹಾಗೂ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ, ರಾಯಬಾಗ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ಅಸ್ತವ್ಯಸ್ತಗೊಂಡಿವೆ. ಮೆಕ್ಕೆಜೋಳ, ಹೆಸರುಕಾಳು ಹಾಗೂ ಸೋಯಾಬೀನ್ ಬೆಳೆಗಳು ಹಾನಿಯಾಗಿದ್ದು, ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಲಾಭ ಕೇವಲ ವಿಮಾ ಕಂಪನಿಗಳ ಪಾಲಾಗುತ್ತಿದೆಯೇ ಹೊರತು ಶೇ. 30ರಷ್ಟು ರೈತರಿಗೆ ಸೂಕ್ತ ಪರಿಹಾರ ತಲುಪುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಕಷ್ಟದ ಈ ಸಮಯದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಾತ್ಕಾಲಿಕ ಆಸರೆಯಾಗಿವೆಯೆ ಹೊರತು ಇದು ಶಾಶ್ವತ ಪರಿಹಾರವಲ್ಲ ಎಂದರು.
ಕಳಸಾ ಬಂಡೂರಿ ಸೇರಿದಂತೆ ಬಾಕಿ ಉಳಿದಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಜಲಮೂಲಗಳ ಸಂರಕ್ಷಣೆ ಮತ್ತು ಮೇವು ಸಂಗ್ರಹಣೆಗೆ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು. ಕೇಂದ್ರ ಸರ್ಕಾರವು ಗಡಿಭಾಗದ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಬೇಕಿದ್ದು, ಮುಖ್ಯಮಂತ್ರಿಗಳು ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಿ ಬಳಿಗೆ ಕೊಂಡೊಯ್ದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು. ಕೆರೆಗಳ ಹೂಳು ತೆಗೆಯುವುದು, ಕೃಷಿ ಇಲಾಖೆಯಿಂದ ವಿಶೇಷ ತಂಡಗಳ ರಚನೆ ಹಾಗೂ ರೈತರ ಸಾಲ ಮನ್ನಾದಂತಹ ಜನಪರ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ರೈತಾಪಿ ವರ್ಗಕ್ಕೆ ಆತ್ಮಸ್ಥೈರ್ಯ ತುಂಬಬೇಕು ಎಂದು ಅವರು ಸದನದಲ್ಲಿ ಆಗ್ರಹಿಸಿದರು.
