ಖಾನಾಪುರ ತಾಲ್ಲೂಕಿನ ಪಶ್ಚಿಮ ಭಾಗದ ಕಬನಾಳಿ ಗ್ರಾಮದ ಶಿವಾರಿನಲ್ಲಿ ಕಾಡಾನೆಗಳು ದಾಳಿ ನಡೆಸಿ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ನಾಶಪಡಿಸಿವೆ. ಒಂದೆಡೆ ಮಳೆಯಿಲ್ಲದೆ ಕಂಗೆಟ್ಟಿರುವ ರೈತರಿಗೆ, ಮತ್ತೊಂದೆಡೆ ಆನೆಗಳ ಕಾಟದಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಹಾಗೂ ಉಪವಾಸದ ಭೀತಿ ಎದುರಾಗಿದೆ.


ಖಾನಾಪುರ ತಾಲ್ಲೂಕಿನ ನಿಲವಾಡೆ ಗ್ರಾ.ಪಂ. ವ್ಯಾಪ್ತಿಯ ಕಬನಾಳಿ ಗ್ರಾಮದ ಬೆಟಗೇರಿ ಹಾಗೂ ಭೋವಿ ಗದ್ದೆಗಳಲ್ಲಿ ಗುರುವಾರ ಕಾಡಾನೆಗಳು ನುಗ್ಗಿ ಭತ್ತದ ಬೆಳೆಯನ್ನು ಹಾನಿ ಮಾಡಿವೆ. ಸ್ಥಳೀಯ ರೈತರಾದ ಲಕ್ಷ್ಮಣ ರಾಣೆ, ಪ್ರಕಾಶ್ ರಾಣೆ, ಚಾಳೋಬಾ ಹುಳಣಕರ್ ಹಾಗೂ ಉಮಾಜಿ ಗಾವಡೆ ಸೇರಿದಂತೆ ಹಲವರ ಜಮೀನುಗಳಲ್ಲಿ ಬೆಳೆದಿದ್ದ ಭತ್ತದ ಬೆಳೆಯನ್ನು ಆನೆಗಳು ತುಳಿದು, ತಿಂದು ನಾಶಪಡಿಸಿವೆ. ವಿಷಯ ತಿಳಿಯುತ್ತಿದ್ದಂತೆ ನಿಲವಾಡೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ವಿನಾಯಕ ಮುತಗೇಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮಳೆಯಿಲ್ಲದೆ ಈಗಾಗಲೇ ಕಂಗಾಲಾಗಿರುವ ರೈತರಿಗೆ, ಕಣ್ಣೆದುರೇ ಬೆಳೆ ನಾಶವಾಗುತ್ತಿರುವುದು ದಿಕ್ಕು ತೋಚದಂತಾಗಿದೆ. ತಕ್ಷಣವೇ ಸ್ಥಳೀಯ ಶಾಸಕರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ, ಕಾಡಾನೆಗಳ ಹಾವಳಿಗೆ ಶಾಶ್ವತ ತಡೆ ಒಡ್ಡುವ ಮೂಲಕ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಲಾಗಿದೆ.
