Chikkodi

ಫ್ಯಾಕ್ಟರಿ ಮಾರಿದರೂ ಕಬ್ಬಿಗೆ ₹5,500 ದರ ನೀಡಲು ಸಾಧ್ಯವಿಲ್ಲ: ಪ್ರಭಾಕರ ಕೋರೆ ಸ್ಪಷ್ಟನೆ

Share

ರೈತರ ಪ್ರಮುಖ ಬೇಡಿಕೆಯಾದ ಪ್ರತಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆ ನೀಡುವುದು ಪ್ರಸ್ತುತ ಸನ್ನಿವೇಶದಲ್ಲಿ ಯಾವುದೇ ಸಕ್ಕರೆ ಕಾರ್ಖಾನೆಗೆ ಸಾಧ್ಯವಿಲ್ಲ. ಕಾರ್ಖಾನೆಯನ್ನೇ ಮಾರಾಟ ಮಾಡಿದರೂ ಅಷ್ಟು ದರ ಕೊಡುವುದಕ್ಕೆ ಆಗುವುದಿಲ್ಲ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಉದ್ಯಮಿ ಡಾ. ಪ್ರಭಾಕರ ಕೋರೆ ಸ್ಪಷ್ಟಪಡಿಸಿದ್ದಾರೆ.

ತಾಲೂಕಿನ ನಣದಿ ಗ್ರಾಮದ ಚಿದಾನಂದ ಕೋರೆ ಸಕ್ಕರೆ ಕಾರ್ಖಾನೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಕ್ಕರೆ ಉದ್ಯಮ ಎದುರಿಸುತ್ತಿರುವ ತೀವ್ರ ಸಂಕಷ್ಟಗಳ ಕುರಿತು ಕಳವಳ ವ್ಯಕ್ತಪಡಿಸಿದರು.

ಕಳೆದ 15 ವರ್ಷಗಳಿಂದ ಮಾರುಕಟ್ಟೆಯಲ್ಲಿ ಸಕ್ಕರೆ ದರದಲ್ಲಿ ಗಮನಾರ್ಹ ಏರಿಕೆಯಾಗಿಲ್ಲ. ಆದರೆ ಕಚ್ಚಾ ಸಾಮಗ್ರಿಗಳ ವೆಚ್ಚ ಮತ್ತು ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಸಿದ್ಧ ಉತ್ಪನ್ನ ಹಾಗೂ ಕಚ್ಚಾ ವಸ್ತುವಿನ ದರಗಳ ನಡುವೆ ದೊಡ್ಡ ಅಂತರವಿದೆ.ಸಕ್ಕರೆ ಕಾರ್ಖಾನೆಗಳಿಂದ ಸರಕಾರಕ್ಕೆ ಪ್ರತಿ ಯೂನಿಟ್‌ಗೆ ₹3 ರಂತೆ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ ಸರಕಾರದಿಂದ ಕಳೆದ 3 ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಹಣ ಪಾವತಿಯಾಗುತ್ತಿಲ್ಲ. ಈ ಎಲ್ಲ ಆರ್ಥಿಕ ಸಂಕಷ್ಟಗಳ ನಡುವೆಯೂ ಕಾರ್ಖಾನೆಗಳು ರೈತರಿಗೆ ಕಾಲಕಾಲಕ್ಕೆ ಹಣ ಪಾವತಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ.

ಈ ವರ್ಷ ಸಮರ್ಪಕ ಮಳೆಯಾಗದೆ ರೈತರು ಕಷ್ಟದಲ್ಲಿದ್ದಾರೆ ನಿಜ. ಆದರೆ ಮಾರುಕಟ್ಟೆಯಲ್ಲಿ ಕಬ್ಬಿನ ಇಳುವರಿ ಮತ್ತು ಸಕ್ಕರೆ ಮಾರಾಟದ ಮೇಲಿನ ಸರ್ಕಾರದ ನಿಯಂತ್ರಣಗಳು ಉದ್ಯಮಕ್ಕೆ ಮುಳ್ಳಾಗಿವೆ. ಕೇವಲ 15 ದಿನಗಳಲ್ಲಿ 1 ಲಕ್ಷ ಚೀಲ ಸಕ್ಕರೆ ಮಾರಾಟ ಮಾಡುವುದು ವ್ಯಾಪಾರಿಗಳಿಗೂ ದೊಡ್ಡ ಸವಾಲಾಗಿದೆ.

ಸಕ್ಕರೆ ರಂಗವು ಪ್ರಸ್ತುತ ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿದ್ದು, ರೈತರ ಬೇಡಿಕೆ ಹಾಗೂ ಕಾರ್ಖಾನೆಗಳ ವಾಸ್ತವ ಸ್ಥಿತಿಯ ನಡುವೆ ದೊಡ್ಡ ವ್ಯತ್ಯಾಸವಿದೆ ಎಂದು ಅವರು ವಿವರಿಸಿದರು.

Tags:

error: Content is protected !!