ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ವಿಸರ್ಜನಾ ಮಹೋತ್ಸವವನ್ನು ಅತ್ಯಂತ ಶಾಂತಿಯುತ ಹಾಗೂ ಸುರಕ್ಷಿತವಾಗಿ ಯಶಸ್ವಿಗೊಳಿಸಲು ಪೊಲೀಸ್ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮೆರವಣಿಗೆಯನ್ನು ಬೇಗ ಆರಂಭಿಸಿ ನಿಗದಿತ ಸಮಯದೊಳಗೆ ವಿಸರ್ಜನೆ ಪೂರ್ಣಗೊಳಿಸುವಂತೆ ಕಮಿಷನರ್ ಪ್ರಕಾಶ್ ನಿಕಮ್ ಅವರು ಸಾರ್ವಜನಿಕರು ಹಾಗೂ ಸಮಿತಿಗಳಿಗೆ ವಿಶೇಷ ಮನವಿ ಮಾಡಿದ್ದು, ಒಟ್ಟಾರೆ ಬಂದೋಬಸ್ತ್ ಕುರಿತು ಸಂಪೂರ್ಣ ವರದಿ ಇಲ್ಲಿದೆ.

ಮುಂಬರುವ ಗಣೇಶ ಹಬ್ಬದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಬಿಗಿ ಪೊಲೀಸ್ ಸಿದ್ಧತೆಗಳು ಪೂರ್ಣಗೊಂಡಿವೆ. ಇಂದು ಗಣೇಶ ವಿಸರ್ಜನಾ ಮೆರವಣಿಗೆಗೆ ನಿಯೋಜನೆಗೊಂಡ ಪೊಲೀಸ್ ಪಡೆಗೆ ಪೊಲೀಸ್ ಕಮಿಷ್ನರ್ ಅವರ ನೇತೃತ್ವದಲ್ಲಿ ಮಾರ್ಗದರ್ಶನ ನೀಡಿ, ನಿಯೋಜಿತ ಸ್ಥಳಗಳಿಗೆ ಕಳುಹಿಸಿ ಕೊಡಲಾಯಿತು.
ಈ ಕುರಿತು ಕಮಿಷನರ್ ಪ್ರಕಾಶ್ ನಿಕಮ್ ಮಾಧ್ಯಮಗಳಿಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಗಣೇಶ ವಿಸರ್ಜನೆಗೆ ಸುಮಾರು 36 ಗಂಟೆಗಳು ತೆಗೆದುಕೊಂಡಿದ್ದ ಹಿನ್ನೆಲೆಯಲ್ಲಿ, ಈ ಬಾರಿ ಆ ಸಮಯವನ್ನು ಗಮನಾರ್ಹವಾಗಿ ತಗ್ಗಿಸಲು ಪೊಲೀಸ್ ಇಲಾಖೆಯಿಂದ ಅಗತ್ಯ ಮುನ್ನೆಚ್ಚರಿಕೆ ಹಾಗೂ ಮಾತುಕತೆಗಳನ್ನು ನಡೆಸಲಾಗುತ್ತಿದೆ. ಮೆರವಣಿಗೆಯನ್ನು ಬೆಳಿಗ್ಗೆ ಅಥವಾ ತಡವಾಗಿ ಆರಂಭಿಸದೆ, ರಾತ್ರಿ 8 ಗಂಟೆಯೊಳಗೆ ಆರಂಭಿಸಿ ಆದಷ್ಟು ಬೇಗ ಮುಗಿಸಿಕೊಡುವಂತೆ ಗಣೇಶ ಮಂಡಳಿಗಳಿಗೆ ಮನವಿ ಮಾಡಲಾಗಿದೆ. ವಿಸರ್ಜನಾ ಪ್ರಕ್ರಿಯೆಯನ್ನು ಶಾಂತಿಯುತವಾಗಿ ಪೂರ್ಣಗೊಳಿಸಲು ಯಾರೂ ಕೂಡ ಕೊನೆಯಲ್ಲಿ ಗಣೇಶನನ್ನು ಕಳುಹಿಸಲು ಪರಸ್ಪರ ಸ್ಪರ್ಧೆ ಮಾಡಬಾರದು ಎಂದು ಅವರು ಕಳಕಳಿಯ ವಿನಂತಿ ಮಾಡಿಕೊಂಡಿದ್ದಾರೆ.
ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ನಗರಾದ್ಯಂತ ಭರ್ಜರಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಹೊರಗಡೆಯಿಂದ ಸುಮಾರು 5,000ಕ್ಕೂ ಹೆಚ್ಚು ಸಿಬ್ಬಂದಿ ಬರಲಿದ್ದು, ಒಟ್ಟು 6,000 ರಿಂದ 7,000 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ. ಇದರೊಂದಿಗೆ ಈಗಾಗಲೇ 500ಕ್ಕೂ ಹೆಚ್ಚು ಹೊಸ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇಲಾಖೆಯ ಅಸ್ತಿತ್ವದಲ್ಲಿರುವ 600 ಕ್ಯಾಮೆರಾಗಳೊಂದಿಗೆ ಒಟ್ಟುಗೂಡಿಸಿ ಒಟ್ಟು 1,100ಕ್ಕೂ ಅಧಿಕ ಕ್ಯಾಮೆರಾಗಳ ಮೂಲಕ ತೀವ್ರ ಕಣ್ಗಾವಲಿಡಲಾಗಿದೆ. ಜೊತೆಗೆ, ಆರ್.ಟಿ.ಒ, ಕೆ.ಎಸ್.ಆರ್.ಟಿ.ಸಿ ಮತ್ತು ಹೆಸ್ಕಾಂ ಸೇರಿದಂತೆ ಪ್ರತಿಯೊಂದು ವಿಭಾಗಕ್ಕೂ ಡಿಸಿಪಿಗಳ ನೇತೃತ್ವದಲ್ಲಿ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಯಾವುದೇ ತುರ್ತು ಸಮಸ್ಯೆಗಳಿದ್ದರೂ ಕೂಡಲೇ ಸಮನ್ವಯ ಸಾಧಿಸಿ ಬಗೆಹರಿಸಲಾಗುತ್ತದೆ. ಈ ವರ್ಷ ಹಬ್ಬವನ್ನು ಅತ್ಯಂತ ಶಾಂತಿಯುತವಾಗಿ ಆಚರಿಸಲಾಗುತ್ತಿದ್ದು, ಯಾವುದೇ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಯಾವುದೇ ಸಮಸ್ಯೆ ಅಥವಾ ಮಾಹಿತಿ ಇದ್ದರೆ 24 ಗಂಟೆಯೂ ಲಭ್ಯವಿರುವ ಪೊಲೀಸ್ ಇಲಾಖೆಯನ್ನು ತಕ್ಷಣವೇ ಸಂಪರ್ಕಿಸಬಹುದೆಂದು ಕಮಿಷನರ್ ಸ್ಪಷ್ಟಪಡಿಸಿದ್ದಾರೆ.
