ಬೆಳಗಾವಿ ಡಿಸಿಸಿ ಬ್ಯಾಂಕ್‌ನ 104 ಹುದ್ದೆಗಳ ನೇಮಕಾತಿ ಅಧಿಸೂಚನೆ ರದ್ದಾಗಿದ್ದು, ಸುಮಾರು 21 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪಾವತಿಸಿರುವ ಕೋಟ್ಯಂತರ ರೂ. ಶುಲ್ಕವನ್ನು ಮರುಪಾವತಿಸುವಂತೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಆಗ್ರಹಿಸಿದ್ದಾರೆ.

ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ ಖಾಲಿ ಇದ್ದ 104 ಹುದ್ದೆಗಳ ನೇರ ನೇಮಕಾತಿಗಾಗಿ 2026ರ ಜುಲೈ 21 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಅಧಿಸೂಚನೆಯಲ್ಲಿದ್ದ ತಾಂತ್ರಿಕ ಲೋಪದೋಷಗಳ ಕಾರಣದಿಂದಾಗಿ ಸಹಕಾರ ಸಂಘಗಳ ನಿಬಂಧಕರು ಆಗಸ್ಟ್ 25 ರಂದು ಈ ಪ್ರಕಟಣೆಯನ್ನು ಅಧಿಕೃತವಾಗಿ ರದ್ದುಗೊಳಿಸಿದ್ದರು. ಇದರಿಂದಾಗಿ ಸುಮಾರು 21 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಜೊತೆಗೆ ಪಾವತಿಸಿದ್ದ ಅಂದಾಜು 1 ಕೋಟಿ 50 ಲಕ್ಷ ರೂ. ಶುಲ್ಕವನ್ನು ಕೂಡಲೇ ವಾಪಸ್ ನೀಡಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಸಾಮಾನ್ಯವಾಗಿ ಅಧಿಸೂಚನೆ ರದ್ದಾಗಿ ಹೊಸದಾಗಿ ಪ್ರಕಟಣೆ ಹೊರಡಿಸಿದಾಗ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಆದರೆ, ಬ್ಯಾಂಕ್ ಅಧ್ಯಕ್ಷರು ಹಾಗೂ ಮಾಜಿ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ ಅವರು “ಹಳೆಯ ಅರ್ಜಿಗಳನ್ನೇ ಪರಿಗಣಿಸಲಾಗುವುದು, ಹೊಸದಾಗಿ ಅರ್ಜಿ ಹಾಕಬೇಕಿಲ್ಲ” ಎಂದು ಹೇಳಿಕೆ ನೀಡಿರುವುದು ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸಿದೆ. ಬ್ಯಾಂಕ್ ಯಾವ ದೇಶದ ಕಾನೂನಿನ ಪ್ರಕಾರ ಆಡಳಿತ ನಡೆಸುತ್ತಿದೆ ಎಂಬುದನ್ನು ಸರ್ಕಾರವೇ ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಅವರು ತೀವ್ರವಾಗಿ ಪ್ರಶ್ನಿಸಿದ್ದಾರೆ.
