BELAGAVI

ವಿವಾ ಫಾರ್ಮಾ ನಕಲಿ ಔಷಧಿ ವಿತರಣೆಯ ಆರೋಪ; ಬೆಳಗಾವಿಯಲ್ಲಿ ಕರವೇ ಪ್ರತಿಭಟನೆ; ಸಿಬಿಐ ತನಿಖೆಗೆ ಆಗ್ರಹ!

Share

ನಕಲಿ ಔಷಧಿ ವಿತರಿಸಲಾಗುತ್ತಿದೆ ಎಂದು ಆರೋಪಿಸಿ ವಿವಾ ಫಾರ್ಮಾ ಕಚೇರಿ ಎದುರು ಕರವೇ ನಾರಾಯಣಗೌಡ ಬಣ ಪ್ರತಿಭಟನೆ ನಡೆಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ.

ಬೆಳಗಾವಿಯ ಕ್ಲಬ್ ರಸ್ತೆಯ ಜ್ಯೋತಿ ಕಾಲೇಜು ಎದುರಿನ ವಿವಾ ಫಾರ್ಮ್ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಹೊರರಾಜ್ಯಗಳಿಂದ ಅತ್ಯಂತ ಕಡಿಮೆ ದರಕ್ಕೆ ನಕಲಿ ಔಷಧಿಗಳನ್ನು ತರಿಸಿ, ಅವುಗಳಿಗೆ ವಿವಿಧ ಪ್ರತಿಷ್ಠಿತ ಕಂಪನಿಗಳ ನಕಲಿ ಲೇಬಲ್ ಅಂಟಿಸಿ ರಾಜ್ಯಾದ್ಯಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಅಕ್ರಮ ಜಾಲವನ್ನು ಪತ್ತೆ ಮಾಡಲಾಗಿದೆ. ಈ ವಂಚನೆ ಜಾಲದ ಹಿಂದೆ ಹರ್ಷವರ್ಧನ್ ಅನಿಲ್ ಕುಮಾರ್ ಹಿಂಚಲ್ ಎಂಬಾತನ ಕೈವಾಡವಿದ್ದು, ಬೆಳಗಾವಿ ಮಾತ್ರವಲ್ಲದೆ ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ ಹಾಗೂ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈ ದಂಧೆ ಅವ್ಯಾಹತವಾಗಿ ಸಾಗುತ್ತಿದೆ. ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿ ಕರವೇ ಮುಖಂಡ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು. ಆರೋಪಿಗಳ ವಿರುದ್ಧ ಕೇವಲ ಪರವಾನಗಿ ರದ್ದುಪಡಿಸಿದರೆ ಸಾಲದು, ಕೂಡಲೇ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಬೇಕು ಎಂದು ಕರವೇ ಆಗ್ರಹಿಸಿದೆ. ರಾಜ್ಯದ ಜನತೆಯ ಆರೋಗ್ಯ ರಕ್ಷಣೆ ಹಾಗೂ ಈ ಜಾಲದ ಹಿಂದಿನ ಜಾಲವನ್ನು ಬೇರುಸಹಿತ ಕಿತ್ತುಹಾಕಲು ಈ ಗಂಭೀರ ಪ್ರಕರಣವನ್ನು ಕೂಡಲೇ ಸಿಬಿಐ ಅಥವಾ ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಕರವೇ ಮುಖಂಡರು ಕರಾರುವಾಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಕರವೇ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೀಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Tags:

error: Content is protected !!