Belagavi

ಅನಗತ್ಯ ನಿರ್ಬಂಧ ಹೇರಲ್ಲ ಆದರೇ ಸಮಯ ಮಿತಿಯೊಳಗೆ ಗಣೇಶ ವಿಸರ್ಜನೆ ಪೂರ್ಣಗೊಳಿಸಿ; ಕಮಿಷ್ನರ್ ನಿಕಮ್

Share

ಐತಿಹಾಸಿಕ ಬೆಳಗಾವಿ ಗಣೇಶೋತ್ಸವದ ಕೊನೆಯ ನಾಲ್ಕು ದಿನಗಳ ಮೆರವಣಿಗೆ ಹಾಗೂ ವಿಸರ್ಜನಾ ಮಹೋತ್ಸವವನ್ನು ಅತ್ಯಂತ ಅಚ್ಚುಕಟ್ಟಾಗಿ, ಯಾವುದೇ ಗೊಂದಲವಿಲ್ಲದೆ ಯಶಸ್ವಿಗೊಳಿಸಲು ಪೊಲೀಸ್ ಇಲಾಖೆ ಸಕಲ ಸಿದ್ಧತೆ ನಡೆಸಿದೆ. ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಲಾಗಿದ್ದು, ಮಂಡಳಗಳ ಹಾಗೂ ಸಾರ್ವಜನಿಕರ ಸಂಪೂರ್ಣ ಸಹಕಾರದೊಂದಿಗೆ ಹಬ್ಬವನ್ನು ಅತ್ಯಂತ ಶಾಂತಿಯುತವಾಗಿ ಆಚರಿಸಲು ಮಹತ್ವದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಬೆಳಗಾವಿಯ ಗಣೇಶೋತ್ಸವದ ಕೊನೆಯ ನಾಲ್ಕು ದಿನಗಳ ದಟ್ಟಣೆ ನಿರ್ವಹಣೆ ಮತ್ತು ವಿಸರ್ಜನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕಮ್ ಅವರ ಅಧ್ಯಕ್ಷತೆಯಲ್ಲಿ ಇಂದು ಪ್ರಮುಖ ಪೂರ್ವಭಾವಿ ಸಭೆ ಜರುಗಿತು. ಐತಿಹಾಸಿಕ ಹಿನ್ನೆಲೆಯುಳ್ಳ ಈ ಹಬ್ಬದ ಅಂತಿಮ ದಿನಗಳು ಅತ್ಯಂತ ಮಹತ್ವದ್ದಾಗಿರುವುದರಿಂದ, ಗಣೇಶ ಮಂಡಳಗಳು ಪೊಲೀಸ್ ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕೆಂದು ಡಿಸಿಪಿ ನಾರಾಯಣ್ ಬರಮನಿ ಮನವಿ ಮಾಡಿದರು.

ವಿಸರ್ಜನಾ ಮಾರ್ಗದಲ್ಲಿ ತೂಗಾಡುವ ವೈರ್’ಗಳನ್ನು ಎತ್ತರಿಸುವುದು, ರಸ್ತೆಯ ಗುಂಡಿಗಳನ್ನು ಮುಚ್ಚುವುದು ಹಾಗೂ ವಿಸರ್ಜನಾ ಕೆರೆಗಳ ಸ್ವಚ್ಛತೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಕುರಿತು ಮಹಾಮಂಡಳದ ಕಾರ್ಯಕರ್ತರು ಸಭೆಯಲ್ಲಿ ಹಲವು ಮಹತ್ವದ ಸಲಹೆಗಳನ್ನು ಮಂಡಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕಮ್, ಮುಂಬರುವ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಅತಿಯಾದ ತೊಂದರೆ ಅಥವಾ ಅನಗತ್ಯ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಹಬ್ಬದ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳನ್ನು ನಿಗದಿತ ಸಮಯದೊಳಗೆ ಮುಗಿಸುವಂತೆ ಮಂಡಳಗಳಿಗೆ ಸೂಚಿಸಿರುವ ಅವರು, ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯು 24 ಗಂಟೆಯೂ ಸದಾ ಲಭ್ಯವಿರಲಿದೆ ಎಂದು ಭರವಸೆ ನೀಡಿದರು. ಮಂಡಳಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತಮ್ಮ ಜವಾಬ್ದಾರಿಯನ್ನು ಅರಿತು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಮಹಾಮಂಡಳದ ಅಧ್ಯಕ್ಷರು, ಪದಾಧಿಕಾರಿಗಳು, ಡಿಸಿಪಿ ನಿರಂಜನ್ ರಾಜೇ ಅರಸ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!