BELAGAVI

*ಬೆಳಗಾವಿ: ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ರಾಷ್ಟ್ರಪಕ್ಷಿ ನವಿಲಿನ ರಕ್ಷಣೆ!*

Share

ಬೆಳಗಾವಿಯ ಶಹಾಪುರದಲ್ಲಿ ಬೀದಿ ನಾಯಿಗಳ ದಾಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ ರಾಷ್ಟ್ರಪಕ್ಷಿ ನವಿಲನ್ನು ಸಾಮಾಜಿಕ ಕಾರ್ಯಕರ್ತರ ತಂಡ ಸಮಯಪ್ರಜ್ಞೆ ಮೆರೆದು ರಕ್ಷಿಸಿದೆ. ಸಕಾಲದಲ್ಲಿ ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆಗೆ ಒಪ್ಪಿಸುವ ಮೂಲಕ ಪಕ್ಷಿಯ ಪ್ರಾಣ ಉಳಿಸಲಾಗಿದೆ. ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಗೆ ಈ ಘಟನೆ ಹಿಡಿದ ಕನ್ನಡಿಯಾಗಿದೆ.

ಬೆಳಗಾವಿಯ ಶಹಾಪುರದ ಕೆ.ಎಲ್.ಇ ಆಯುರ್ವೇದಿಕ್ ಆಸ್ಪತ್ರೆಯ ಹಿಂಭಾಗದಲ್ಲಿ ಗಾಯಗೊಂಡಿದ್ದ ನವಿಲಿನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದವು. ಈ ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣ ರಂಗಕ್ಕಿಳಿದ ‘ಸೋಷಿಯಲ್ ವರ್ಕರ್ ರಿಸ್ಕ್ಯೂ ಟೀಮ್’ ಬೆಳಗಾವಿ ಘಟಕದ ಅವಧೂತ್ ತುಡವೇಕರ್, ಪದ್ಮಪ್ರಸಾದ್ ಹೂಲಿ, ವಿಕಿ ಮೆಹ್ತಾ, ಪ್ರಥಮೇಶ್ ಸಾಲೋಖೆ ಹಾಗೂ ಧೀರ್ ಮೆಹ್ತಾ ಸ್ಥಳಕ್ಕೆ ಧಾವಿಸಿ ನವಿಲನ್ನು ಬೀದಿ ನಾಯಿಗಳಿಂದ ರಕ್ಷಿಸಿದರು. ಬಳಿಕ ಕೋಲ್ಹಾಪುರ ಸರ್ಕಲ್ ಬಳಿಯ ‘ಸೋಲ್ಮೇಟ್ ಪೆಟ್ ಕ್ಲಿನಿಕ್’ಗೆ ಕೊಂಡೊಯ್ದು, ವೈದ್ಯರ ನೆರವಿನಿಂದ ಉಚಿತ ತುರ್ತು ಪ್ರಥಮ ಚಿಕಿತ್ಸೆ ಕೊಡಿಸಿದರು. ಪ್ರಥಮ ಚಿಕಿತ್ಸೆಯ ನಂತರ, ನವಿಲನ್ನು ಮುಂದಿನ ಆರೈಕೆ ಮತ್ತು ಪುನರ್ವಸತಿಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು.

ಈ ಘಟನೆಯು ಬೆಳಗಾವಿ ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯ ಗಂಭೀರತೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಸಾರ್ವಜನಿಕರ ಹಾಗೂ ವನ್ಯಜೀವಿಗಳ ಸುರಕ್ಷತೆಯ ದೃಷ್ಟಿಯಿಂದ ಮಹಾನಗರ ಪಾಲಿಕೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಸೂಕ್ತ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತರು ಮತ್ತು ಸ್ಥಳೀಯ ನಾಗರಿಕರು ತೀವ್ರವಾಗಿ ಆಗ್ರಹಿಸಿದ್ದಾರೆ.

Tags:

error: Content is protected !!