Vijaypura

ಧುಂಧು ವೆಚ್ಚಕ್ಕೆ ಕಡಿವಾಣ ಹಾಕಿ, ರೈತರ ಸಾಲಮನ್ನಾ ಮಾಡಿ: ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

Share

ರಾಜ್ಯದಲ್ಲಿ ಭೀಕರ ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದ ಸಚಿವರು, ಶಾಸಕರು ಹಾಗೂ ಉನ್ನತಾಧಿಕಾರಿಗಳು ತಮ್ಮ ಸಂಬಳ ಸೇರಿದಂತೆ ಧುಂಧು ವೆಚ್ಚಗಳಿಗೆ ಕಡಿವಾಣ ಹಾಕಿ, ಆ ಹಣವನ್ನು ರೈತರ ನೆರವಿಗೆ ಬಳಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆಗ್ರಹಿಸಿದರು. ವಿಜಯಪುರದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸರ್ಕಾರ ಕನಿಷ್ಠ ಶೇ.10ರಷ್ಟು ಅನಗತ್ಯ ವೆಚ್ಚ ಕಡಿತ ಮಾಡಿದರೂ ಸಾವಿರಾರು ಕೋಟಿ ರೂಪಾಯಿ ಉಳಿತಾಯ ವಾಗಲಿದೆ. ಆ ಹಣದಿಂದ ರೈತರ ಸಾಲಮನ್ನಾ ಮಾಡಬಹುದು ಎಂದರು. ರೈತರ ಸಂಕಷ್ಟವನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ. “ಯಾರಿಗಿದೆ ಈಗ ನಿಮ್ಮ ರಸ್ತೆ, ಮೊದಲು ಅನ್ನ ನೀಡುವ ಅನ್ನದಾತನಿಗೆ ಅನ್ನ ನೀಡಿ” ಎಂದು ನಡಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು. ರೈತರು ಕಠಿಣ ಪರಿಸ್ಥಿತಿಗೆ ತಳ್ಳಲ್ಪಡುತ್ತಿದ್ದು, ಸರ್ಕಾರ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದರು.

ಬೆಳೆ ವಿಮೆ ವಿಚಾರದಲ್ಲಿಯೂ ರೈತರಿಗೆ ಅನ್ಯಾಯವಾಗುತ್ತಿದೆ. ವಿಮೆ ಹೆಸರಿನಲ್ಲಿ ನಡೆಯು ತ್ತಿರುವ ಶೋಷಣೆ ನಿವಾರಣೆ ಯಾಗಬೇಕು ಎಂದು ಒತ್ತಾಯಿಸಿದರು. ತಾಳಿಕೋಟೆ ತಾಲೂಕಿನಲ್ಲಿ ಶಾಶ್ವತ ನೀರಾವರಿ ಕೊರತೆಯಿದ್ದು, ಮಳೆ ಪ್ರಮಾಣವೂ ಕಡಿಮೆ. ಹೀಗಿರುವಾಗ ತಾಳಿಕೋಟೆ ಯನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಚಡಚಣ, ತಾಳಿಕೋಟೆ ಹಾಗೂ ಇಂಡಿ ತಾಲೂಕುಗಳನ್ನು ಕೂಡಲೇ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ಮೈಲ್ಡ್, ಮಾಡರೇಟ್, ಸಿವಿಯರ್ ಎಂಬ ಪದಗಳ ಮೂಲಕ ರೈತರನ್ನು ದಿಕ್ಕು ತಪ್ಪಿಸದೆ, ‘ತೀವ್ರ ಬರಗಾಲ’ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು. ಪ್ರತಿ ಎಕರೆಗೆ ₹50 ಸಾವಿರ ಪರಿಹಾರ
ಮುಂಗಾರು ಹಾಗೂ ಹಿಂಗಾರು ಬೆಳೆ ಹಾನಿಯ ಜೊತೆಗೆ ರೈತರು ಒಂದು ವರ್ಷ ಜೀವನ ಸಾಗಿಸಲು ಅನುಕೂಲವಾಗುವಂತೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ನಡಹಳ್ಳಿ ಒತ್ತಾಯಿಸಿದರು. ರೈತರ ಪರ ನಿರ್ಧಾರಗಳು ಅಧಿವೇಶನದಲ್ಲಿ ಪ್ರಕಟವಾಗದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಾವಿರಾರು ರೈತರ ಸಮ್ಮುಖದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು. ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆಯಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ಬರದ ಗಂಭೀರತೆಯನ್ನು ಅರಿತಿಲ್ಲ. ಶಾಸಕರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಅಗತ್ಯ ಸಭೆಗಳನ್ನು ನಡೆಸುತ್ತಿಲ್ಲ ಎಂದು ಆರೋಪಿಸಿದ ಅವರು, ಜಿಲ್ಲೆಯಲ್ಲಿ ಒಂದಾದರೂ ಮೇವು ಬ್ಯಾಂಕ್ ಸ್ಥಾಪಿಸಿದ್ದರೆ ತೋರಿಸು ವಂತೆ ಉಸ್ತುವಾರಿ ಸಚಿವರಿಗೆ ಸವಾಲು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಾಲರಾಜ್ ರೆಡ್ಡಿ, ಉಮೇಶ ಕಾರಜೋಳ, ಕಾಸುಗೌಡ ಬಿರಾದಾರ, ಶಿಲ್ಪಾ ಕುದರಗೊಂಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:

error: Content is protected !!