ಬೆಳಗಾವಿಯ ಢೋರ್ ಗಲ್ಲಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ಆರು ಜನ ಸಜೀವ ದಹನವಾಗಿರುವುದು ಇಡೀ ನಾಡನ್ನೇ ಬೆಚ್ಚಿಬೀಳಿಸಿದೆ. ಇಂದು ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡಬೇಕೆಂದು ದಲಿತ ಮುಖಂಡರು ಆಗ್ರಹಿಸಿದ್ದಾರೆ.


ಬೆಳಗಾವಿಯ ಢೋರ್ ಗಲ್ಲಿಯ ದಲಿತ ವಸತಿ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ದುರಂತವು ಇಡೀ ನಗರವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ತಗಡಿನ ಶೆಡ್ನಲ್ಲಿ ವಾಸವಿದ್ದ ಅತ್ಯಂತ ಬಡ ದಿನಗೂಲಿ ಕುಟುಂಬದ ಆರು ಮಂದಿ ಪ್ರಾಣ ಕಳೆದುಕೊಂಡಿರುವುದು ಸ್ಥಳೀಯರಲ್ಲಿ ತೀವ್ರ ಆಘಾತ ಹಾಗೂ ಕಣ್ಣೀರನ್ನು ತರಿಸಿದೆ. ಹೊಟ್ಟೆಪಾಡಿಗಾಗಿ ಕಷ್ಟಪಡುತ್ತಿದ್ದ ಈ ಕುಟುಂಬದ ಬದುಕು ಕಣ್ಣುಮುಚ್ಚಿ ಬಿಡುವುದರಲ್ಲಿಯೇ ಸುಟ್ಟು ಭಸ್ಮವಾಗಿರುವುದು ಅತ್ಯಂತ ದುರದೃಷ್ಠಕರ ಸಂಗತಿಯಾಗಿದೆ.
ಇಂದು ಘಟನಾ ಸ್ಥಳಕ್ಕೆ ಬೆಳಗಾವಿ ತಹಶೀಲ್ದಾರರಾದ ಹನುಮಂತ ಶಿರಹಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಾಮನಗೌಡ ಕನ್ನೋಳ್ಳಿ ಹಾಗೂ ಕಂದಾಯ ನಿರೀಕ್ಷಕ ಚಂದ್ರಶೇಖರ್ ಹೊನಕಲ್ಲಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸಿದ್ದಾರೆ. ಈ ವೇಳೆ ಸಂತ್ರಸ್ತ ಕುಟುಂಬದ ಭೀಕರ ಬಡತನದ ಸ್ಥಿತಿಯನ್ನು ಕಣ್ಣಾರೆ ಕಂಡ ಅಧಿಕಾರಿಗಳು, ಸರ್ಕಾರದ ವತಿಯಿಂದ ತುರ್ತು ನೆರವು ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಕುರಿತು ಸ್ಥಳದಲ್ಲಿದ್ದವರಿಗೆ ಭರವಸೆ ನೀಡಿದ್ದಾರೆ.
ಈ ಭೇಟಿಯ ಬಳಿಕ ಮಾತನಾಡಿದ ದಲಿತ ಮುಖಂಡ ಮಲ್ಲೇಶ್ ಚೌಗಲೆ ಅವರು, ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ. ಸಂತ್ರಸ್ತ ಬಡ ಕುಟುಂಬಕ್ಕೆ ಕನಿಷ್ಠ 10 ಲಕ್ಷ ರೂಪಾಯಿ ಪರಿಹಾರ ನೀಡುವುದರ ಜೊತೆಗೆ, ವಾಸಿಸಲು ಹೊಸ ಮನೆಯನ್ನು ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ,
