ವಿಶ್ವಕರ್ಮ ಸಮಾಜದ ಏಳ್ಗೆಗೆ ಪಿಎಂ ಮೋದಿ ಅವರು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ದೇಶದ ನಿರ್ಮಾಣದಲ್ಲಿ ವಿಶ್ವಕರ್ಮರ ಪಾತ್ರ ಹಿರಿದಾಗಿದ್ದು, ವಿಶ್ವಕರ್ಮರಿಗೂ ರಾಜಕೀಯವಾಗಿ ಪ್ರಾತಿನಿಧ್ಯ ನೀಡಬೇಕೆಂದು ಬೆಳಗಾವಿಯ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.


ಬೆಳಗಾವಿಯ ಕುಮಾರಗಂಧರ್ವ ಕಲಾಮಂದಿರದಲ್ಲಿ ಇಂದು ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಶ್ರೀ ವಿಶ್ವಕರ್ಮಾ ಜಯಂತ್ಯೋತ್ಸವನ್ನು ಆಚರಿಸಲಾಯಿತು.
ಗೌರವಾನ್ವಿತ ಅತಿಥಿಗಳಾಗಿ ಸಂಸದ ಜಗದೀಶ್ ಶೆಟ್ಟರ್, ಅತಿಥಿಗಳಾಗಿ ಭರಮಣ್ಣಾ ಉಪ್ಪಾರ ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು. ಗಣ್ಯರಿಂದ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆಯನ್ನು ನೀಡಲಾಯಿತು.

ಈ ವೇಳೆ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್ ಅವರು ಪಿಎಂ ಮೋದಿ ಅವರು ವಿಶ್ವಕರ್ಮಾ ಸೇರಿದಂತೆ ವಿವಿಧ ಸಮಾಜಗಳಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಸರ್ಕಾರದ ಯೋಜನೆಗಳು ಯೋಗ್ಯ ಲಾಭಾರ್ಥಿಗಳಿಗೆ ಮುಟ್ಟಬೇಕು. ಈ ಕುರಿತಾಗಿರುವ ಕುಂದು ಕೊರತೆಗಳನ್ನು ಪ್ರಧಾನ ಮಂತ್ರಿಗಳೊಡನೆ ಚರ್ಚಿಸಿ ನಿವಾರಿಸಲು ಸದಾಸಿದ್ಧರಿರುವುದಾಗಿ ತಿಳಿಸಿದರು. ವಿಶ್ವಕರ್ಮ ಸಮಾಜಕ್ಕೆ ರಾಜಕೀಯವಾಗಿಯೂ ಪ್ರಾತಿನಿಧ್ಯ ಸಿಗಬೇಕು. ರಾಜ ಮಹಾರಾಜರ ಕಾಲದಿಂದಲೂ ದೇಶವನ್ನು ನಿರ್ಮಿಸುವಲ್ಲಿ ವಿಶ್ವಕರ್ಮರ ಪಾತ್ರ ಹಿರಿದಾಗಿದೆ ಎಂದರು.

ಉಪನ್ಯಾಸ ನೀಡಿದ ನಿರ್ಮಲಾ ಬಟ್ಟಲ್ ಅವರು ವಿಶ್ವಕರ್ಮ ಸಮುದಾಯದ ಐತಿಹಾಸಿಕ ಮತ್ತು ಪೌರಾಣಿಕ ಪರಂಪರೆಯನ್ನು ವಿವರಿಸುತ್ತಾ, ಕರಕುಶಲ ವೃತ್ತಿಗಳಲ್ಲಿ ತೊಡಗಿರುವ ಈ ಸಮುದಾಯಕ್ಕೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಹಾಗೂ ಸೌಲಭ್ಯಗಳು ಸಿಗಬೇಕೆಂದು ಒತ್ತಾಯಿಸಿದ್ದಾರೆ. ಉತ್ತರ ಭಾರತದಂತೆ ದಕ್ಷಿಣ ಭಾರತದಲ್ಲೂ ಪಿಎಂ ವಿಶ್ವಕರ್ಮ ಯೋಜನೆಯನ್ನು ಸಮುದಾಯದವರಿಗೆ ಸುಲಭವಾಗಿ ಲಭ್ಯವಾಗುವಂತೆ ಸರಳೀಕರಣಗೊಳಿಸಬೇಕು ಮತ್ತು ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿ ವೇತನ’ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ವೇಳೆ ಎಡಿಸಿ ವಿಜಯಕುಮಾರ್ ಹೊಣಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಿ ವಿದ್ಯಾವತಿ ಭಜಂತ್ರಿ , ಸಮಾಜದ ಗಣ್ಯರು ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
