ಬೆಳಗಾವಿಯ ನಾನಾವಾಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಯು ಈ ಬಾರಿ ವಿನೂತನ ಹಾಗೂ ಪರಿಸರ ಸ್ನೇಹಿ ಹೆಜ್ಜೆಯ ಮೂಲಕ ಎಲ್ಲರ ಗಮನ ಸೆಳೆದಿದೆ. ಕಳೆದ 14 ವರ್ಷಗಳಿಂದ ಪರಿಸರ ಕಾಳಜಿಯನ್ನು ಮೆರೆಯುತ್ತಾ ಬಂದಿರುವ ಈ ಮಂಡಳಿಯು, ಈ ಬಾರಿ ಹತ್ತಾರು ಸಾವಿರ ಅಡಿಕೆಗಳನ್ನು ಬಳಸಿ ಅತ್ಯಾಕರ್ಷಕ ಗಣೇಶ ಮೂರ್ತಿಯನ್ನು ನಿರ್ಮಿಸಿ ಮಾದರಿಯಾಗಿದೆ.


ಬೆಳಗಾವಿಯ ನಾನಾವಾಡಿಯ ‘ಶ್ರೀ ಸಾರ್ವಜನಿಕ ಗಣೇಶೋತ್ಸವ ಮಂಡಳವೂ ಸತತ 14 ವರ್ಷಗಳಿಂದ ಪರಿಸರಸ್ನೇಹಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಪ್ರಸಿದ್ಧ ಶಿಲ್ಪಿ ಮಾರುತಿ ಕುಂಬಾರ ಅವರ ಕೈಯಲ್ಲಿ ರೂಪುಗೊಳ್ಳುವ ಈ ಪರಿಸರ ಸ್ನೇಹಿ ಮೂರ್ತಿಗಳು ಪ್ರಕೃತಿಗೆ ಯಾವುದೇ ಹಾನಿ ಮಾಡದಂತೆ ಎಚ್ಚರಿಕೆ ವಹಿಸುತ್ತವೆ. ಈ ಮೂಲಕ ಮಂಡಳವೂ ಸಮಾಜಕ್ಕೆ ಹಸಿರು ಸಂಭ್ರಮದ ಉತ್ತಮ ಸಂದೇಶವನ್ನು ನಿರಂತರವಾಗಿ ಸಾರುತ್ತಿದೆ.
ಈ ಬಾರಿ ವಿಶೇಷವಾಗಿ ಗಣೇಶ ಮೂರ್ತಿಗೆ ಒಟ್ಟು 18,102 ವಿವಿಧ ರೀತಿಯ ಅಡಿಕೆಗಳನ್ನು ಬಳಸಿ ಅತ್ಯಂತ ಆಕರ್ಷಕವಾಗಿ ಅಲಂಕಾರ ಮಾಡಲಾಗಿದೆ. ಮಂಡಳದ ಮನೀಶ್ ಪಾಟೀಲ್, ಸಚಿನ್ ನಂದೇಶ್ವರ, ಮಹೇಂದ್ರ ನಂದೇಶ್ವರ, ಸುನೀಲ್ ಪಾಟೀಲ್ ಮತ್ತು ಆರತಿ ಪಾಟೀಲ್ ಸೇರಿದಂತೆ ಐವರು ಯುವ ಕಾರ್ಯಕರ್ತರು ಕಳೆದ 20 ದಿನಗಳಿಂದ ನಿರಂತರ ಶ್ರಮವಹಿಸಿ ಈ ಸುಂದರ ಕಲಾಕೃತಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಮಂಡಳದ ಪ್ರಮುಖರಾದ ರವೀಂದ್ರ ಮನೋಹರ್ ಸಾವಂತ್ ತಿಳಿಸಿದ್ದಾರೆ.
ಉತ್ಸವದ ಅಂಗವಾಗಿ ಡಾ. ಅನೀಲ್ ಪಾಟೀಲ್ ನೇತೃತ್ವದಲ್ಲಿ ವೈದ್ಯಕೀಯ ಶಿಬಿರ ಹಾಗೂ ಸೆಪ್ಟೆಂಬರ್ 20ರಂದು ಮಹಾಪ್ರಸಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಸ್ವಚ್ಛ ಭಾರತ ಅಭಿಯಾನ, ಮಕ್ಕಳಿಗೆ ಬೌದ್ಧಿಕ ಸ್ಪರ್ಧೆಗಳು ಮತ್ತು ಶಾಲಾ ಮಕ್ಕಳಿಗೆ ಸಾಹಿತ್ಯ ವಿತರಣೆಯಂತಹ ವಿವಿಧ ಜನಪರ ಕಾರ್ಯಕ್ರಮಗಳನ್ನು ಮಂಡಳಿಯು ವರ್ಷಪೂರ್ತಿ ಆಯೋಜಿಸುತ್ತಾ ಬಂದಿದೆ.
