ಮಕ್ಕಳ ಸಾಹಿತ್ಯ ಮತ್ತು ಸಂಸ್ಕೃತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ವತಿಯಿಂದ ನವೆಂಬರ್ ಮೊದಲ ವಾರದಲ್ಲಿ ಬೆಳಗಾವಿಯಲ್ಲಿ ಮೂರು ದಿನಗಳ ಕಾಲ ರಾಜ್ಯಮಟ್ಟದ “ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನ”ವನ್ನು ಅದ್ದೂರಿಯಾಗಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಅಡಿವೇಶ್ ಇಟಗಿ ಅವರು ತಿಳಿಸಿದರು.

ಇಂದು ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾಧ್ಯಮಗೋಷ್ಟಿಯಲ್ಲಿ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಶಿವಾಜಿನಗರದ ಡಿ.ಡಿ. ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಬೆಳಗಾವಿ ಹಾಗೂ ಧಾರವಾಡ ಜಿಲ್ಲಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಹಾಗೂ ಅಕಾಡೆಮಿಯ ಸದಸ್ಯರು ಭಾಗವಹಿಸಿದ್ದರು. ಮಳೆಗಾಲ ಮುಗಿದಿರುವ ಹಿನ್ನೆಲೆಯಲ್ಲಿ ಈ ಬೃಹತ್ ಸಮ್ಮೇಳನವನ್ನು ನಗರದ ಸಿ.ಪಿ.ಎಡ್. ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಈ ಮೂರು ದಿನಗಳ ಸಮ್ಮೇಳನದಲ್ಲಿ ಮಕ್ಕಳ ಸರ್ವಾಂಗೀಣ ವಿಕಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮರೆತುಹೋಗುತ್ತಿರುವ ದೇಸಿ ಆಟಗಳಿಗೆ ವಿಶೇಷ ಒತ್ತು ನೀಡಲಾಗುತ್ತದೆ. ರಾಜ್ಯದ ನಾಲ್ಕು ವಿಭಾಗಗಳಿಂದಲೂ ಮಕ್ಕಳು ಆಗಮಿಸಲಿದ್ದು, ಪ್ರತಿದಿನ ಸುಮಾರು 10,000 ರಿಂದ 15,000 ಮಕ್ಕಳು ಭಾಗವಹಿಸುವ ನಿರೀಕ್ಷೆಯಿದೆ. ಆಗಮಿಸುವ ಎಲ್ಲ ಮಕ್ಕಳಿಗೂ ಊಟ ಮತ್ತು ವಸತಿಯ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗುತ್ತಿದೆ. ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಸಾಧಕರ ಸನ್ಮಾನ, ಪ್ರತಿಭಾ ಪ್ರದರ್ಶನ ಹಾಗೂ ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರದಾನದ ಜತೆಗೆ, ಅಕಾಡೆಮಿಯಿಂದ “ಬಾಲ ಬಾಂದವ್ಯ” ಮತ್ತು ಪಾಲಕರೊಂದಿಗೆ ಸಂವಾದದಂತಹ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ.
