ಕೃಷಿ ಹಾನಿ, ಕುಡಿಯುವ ನೀರು ಹಾಗೂ ಅನುದಾನ ಹಂಚಿಕೆಯ ಗರಂ ಬೆಳಗಾವಿಯ ಕೆಡಿಪಿ ಸಭೆ ಚರ್ಚೆಗೆ ಸಾಕ್ಷಿಯಾಯಿತು. ಉತ್ತರ ಹಾಗೂ ದಕ್ಷಿಣ ವಲಯಗಳ ನಡುವಿನ ತಾರತಮ್ಯ ಮತ್ತು ರೈತರ ಸಮಸ್ಯೆಗಳ ಕುರಿತು ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೆಳಗಾವಿಯ ಸುವರ್ಣಸೌಧದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆ ನಡೆಯಿತು. ಸಭೆಯಲ್ಲಿ ಹತ್ತಿ ಮತ್ತು ಈರುಳ್ಳಿ ಬೆಳೆಗಳಿಗೆ ತೀವ್ರ ಹಾನಿಯಾಗಿರುವ ಕುರಿತು ವಿಸ್ತೃತ ಚರ್ಚೆ ನಡೆಯಿತು. ಡಿಸಿ ಮೊಹಮ್ಮದ್ ರೋಷನ್ ಮಾತನಾಡಿ, ಸವದತ್ತಿ, ಯರಗಟ್ಟಿ ಹಾಗೂ ರಾಮದುರ್ಗ ತಾಲೂಕುಗಳಲ್ಲಿ ಈರುಳ್ಳಿ ಬೆಳೆ ಹೆಚ್ಚು ಹಾನಿಗೀಡಾಗಿದ್ದು, ನಿಯಮಾನುಸಾರ ನೀರಾವರಿ ಪ್ರದೇಶದ ರೈತರಿಗೆ ಮಾತ್ರ ಪರಿಹಾರ ಸಿಗಲಿದೆ ಎಂದರು.
ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್ ಮಾತನಾಡಿ, ಅತಿವೃಷ್ಟಿಯಿಂದ ಶೇಕಡಾ 10 ರಿಂದ 15 ರಷ್ಟು ಹತ್ತಿ ಹಾಗೂ ಇತರ ಬೆಳೆಗಳು ಹಾನಿಯಾಗಿದ್ದು, ರೈತರಿಗೆ ಸೂಕ್ತ ನೆರವು ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಶಾಸಕ ವಿಶ್ವಾಸ್ ವೈದ್ಯ ಮಾತನಾಡಿ, ಕೆಲವು ನಿರ್ದಿಷ್ಟ ಬ್ಯಾಂಕ್ಗಳಲ್ಲಿ ಮಾತ್ರ ವಿಮಾ ಮೊತ್ತ ಕಟ್ಟುವಂತೆ ರೈತರ ಮೇಲೆ ಒತ್ತಡ ಹೇರುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕವೇ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.
ಸಿಎಂ ಅನುದಾನ ಹಂಚಿಕೆಯಲ್ಲಿ ವಲಯವಾರು ತಾರತಮ್ಯ ಮಾಡಲಾಗುತ್ತಿದೆ ಎಂದು ಶಾಸಕ ಆಸಿಫ್ ಸೇಠ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ಗುಂಡಿಗಳಿಲ್ಲದ ಹನುಮಾನ ನಗರಕ್ಕೆ ಮೂರು ಲಕ್ಷ ರೂಪಾಯಿ ನೀಡಲಾಗಿದೆ, ಆದರೆ ಗುಂಡಿಗಳಿಂದ ತುಂಬಿರುವ ಛತ್ರಪತಿ ಶಿವಾಜೀ ನಗರಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದರು. ಅಧಿಕಾರಿಗಳು ಸ್ಥಳ ಪರಿಶೀಲಿಸದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಸಭೆಯಲ್ಲಿ ತೀವ್ರವಾಗಿ ಪ್ರಶ್ನಿಸಿ ಬೈಟ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಮಾತನಾಡಿ, ಕುಡಿಯುವ ನೀರನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು ಮತ್ತು ಜಲಾಶಯಗಳ ನಿರ್ವಹಣೆ ಸಮರ್ಪಕವಾಗಿರಬೇಕು ಎಂದು ಎಚ್ಚರಿಸಿದರು. ಶಾಸಕರಾದ ಮಹಾಂತೇಶ ಕೌಜಲಗಿ ಹಾಗೂ ವಿಶ್ವಾಸ್ ವೈದ್ಯ ಕೂಡ ಬೇಸಿಗೆಯಲ್ಲಿ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಒತ್ತಾಯಿಸಿದರು.
ನಗರದ ಕುಡಿಯುವ ನೀರಿನ ಪೂರೈಕೆ ಹಾಗೂ ಜಲಾಶಯಗಳ ನೀರಿನ ನಿರ್ವಹಣೆಗೆ ಸಭೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ಶಾಸಕ ಆಸಿಫ್ ಸೇಠ್ ಮಾತನಾಡಿ, ಕಳೆದ ವರ್ಷದಂತೆ ಈ ವರ್ಷವೂ ಜನಸಂಖ್ಯೆಗೆ ತಕ್ಕಂತೆ ಕುಡಿಯುವ ನೀರು ಪೂರೈಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಹಿಡಕಲ್ ಮತ್ತು ರಾಕಸಕೊಪ್ಪ ಜಲಾಶಯಗಳ ನೀರಿನ ಮಟ್ಟ ಸರಿಯಾಗಿದ್ದು, ಕುಡಿಯುವ ನೀರಿಗೆ ಆದ್ಯತೆ ನೀಡುವ ಭರವಸೆ ನೀಡಿದರು.
ಸಭೆಯಲ್ಲಿ ವಿವಿಧ ಶಾಸಕರು, ಅಧಿಕಾರಿಗಳು ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
