ಬೆಳಗಾವಿಯ ಗಣೇಶೋತ್ಸವ ಅಂದ್ರೆ ಅಲ್ಲಿ ಭಕ್ತಿ ಜತೆಗೆ ಸಾಂಪ್ರದಾಯಿಕ ಕಲೆಯ ಸೊಬಗು ಮೆಳೈಸುತ್ತದೆ. ಈ ಬಾರಿ ಡಾಲ್ಬಿ ಸದ್ದು ಗದ್ದಲಕ್ಕಿಂಥ ಮರ್ದಾನಿ ಆಟ ಹಾಗೂ ಶಿವಕಾಲೀನ ವಾದ್ಯಗಳೇ ಮಂಚೂಣಿಯಲ್ಲಿರೋದು ವಿಶೇಷ. ಇದಕ್ಕೆ ಸಾಕ್ಷಿಯಾಗಿರುವುದು ಬೆಳಗಾವಿಯ ಖಡಕ್ ಗಲ್ಲಿಯ ಗಣೇಶನ ಆಗಮನ.

ಹೌದು, ಬೆಳಗಾವಿಯ ಐತಿಹಾಸಿಕ ಗಣೇಶೋತ್ಸವದಲ್ಲಿ ಈ ಬಾರಿ ಆಧುನಿಕತೆಯ ಭರಾಟೆಗೆ ತಡೆ ಬಿದ್ದು, ಅಪ್ಪಟ ದೇಶಿ ಸಂಸ್ಕೃತಿ ಕಂಗೊಳಿಸಿದೆ. ಕಳೆದ ರಾತ್ರಿ ಬೆಳಗಾವಿಯ ಖಡಕ್ ಗಲ್ಲಿಯ ರಾಜಾ ಗಣೇಶನ ಆಗಮನ ಅದ್ಧೂರಿಯಾಗಿ ನಡೆಯಿತು. ಬೆಳಗಾವಿಯ ಖಡಕ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳದ ಗಣೇಶನ ಆಗಮನೋತ್ಸವವು ಛತ್ರಪತಿ ಧರ್ಮವೀರ ಸಂಭಾಜೀ ಮಹಾರಾಜ್ ವೃತ್ತದಿಂದ ಆರಂಭಗೊಂಡಿತು. ಯಾವುದೇ ಡಿಜೆ ಅಥವಾ ಡಾಲ್ಬಿ ಲೌಡ್‌ಸ್ಪೀಕರ್ ಬಳಸದೆ, ಸಂಪೂರ್ಣವಾಗಿ ಶಿವಕಾಲೀನ ಸಮರ ಕಲೆಗಳು ಮತ್ತು ಪಾರಂಪರಿಕ ಹಲಗೆ ಹಾಗೂ ಢೋಲ್ ತಾಶಾ ಬಳಸಿ ಗಣೇಶ ಮೂರ್ತಿಗಳ ಭವ್ಯ ಆಗಮನೋತ್ಸವ ನೆರವೇರಿಸಿವೆ. ಯುವಕರ ಈ ಸಾಂಪ್ರದಾಯಿಕ ಮೆರವಣಿಗೆ ನೋಡುಗರ ಕಣ್ಮನ ಸೆಳೆಯಿತು.
ಮೆರವಣಿಗೆಯ ಹಾದಿಯಲ್ಲಿ ಕೋಲ್ಹಾಪುರ ಭೂದರಗಡ-ಕೇಳವಾಡಿಯ ಲೇಝಿಮ್ ತಂಡವು ಪ್ರದರ್ಶಿಸಿದ ತಾಲಬದ್ಧ ಹೆಜ್ಜೆಗಳು ನೆರೆದಿದ್ದ ಪ್ರತಿಯೊಬ್ಬರ ಮನ ಗೆದ್ದವು. ಲೇಝಿಮ್ ಪ್ರತಿ ಹೆಜ್ಜೆಗೆ ಯುವಕರಷ್ಟೇ ಅಲ್ಲದೆ ವೃದ್ಧರೂ ಕೂಡ ಉತ್ಸಾಹದಿಂದ ಹೆಜ್ಜೆ ಹಾಕಿ ಕುಣಿದಾಡಿದರು. ಇದರೊಂದಿಗೆ ಸತಾರಾದಿಂದ ಆಗಮಿಸಿದ್ದ ಮರ್ದಾನಿ ಸಾಹಸಿ ಕ್ರೀಡಾ ತಂಡವು ಶಿವಕಾಲೀನ ಪರಂಪರೆಯ ನೆನಪು ಮೂಡಿಸುವ ರೋಮಾಂಚಕ ಕಸರತ್ತುಗಳು ಹಾಗೂ ಮಶಾಲು ಪ್ರದರ್ಶನ ನೀಡಿ ಕನ್ನಡಿಗರ ಹಾಗೂ ಭಕ್ತರ ಮನಸೂರೆಗೊಂಡಿತು.
ಮಂಡಳಿಗಳ ಈ ಮಾದರಿ ಕ್ರಮಕ್ಕೆ ಮಾಜಿ ಶಾಸಕ ಅನಿಲ್ ಬೆನಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಲೋಕಮಾನ್ಯ ಬಾಲಗಂಗಾಧರ ಟಿಳಕರು ಯಾವ ಸದುದ್ದೇಶದಿಂದ ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದ್ದರೋ ಅದು ಇಂದು ಸಾರ್ಥಕವಾಗುತ್ತಿದೆ ಎಂದಿದ್ದಾರೆ. ಡಾಲ್ಬಿ ನಿರ್ಬಂಧದ ನಡುವೆಯೂ ಶಿವಕಾಲೀನ ವಾದ್ಯಗಳು ಮತ್ತು ಮರ್ದಾನಿ ಆಟಗಳಿಗೆ ಮಂಡಳಿಗಳು ಹೆಚ್ಚಿನ ಮಹತ್ವ ನೀಡಿರುವುದು ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಅತ್ಯಂತ ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸೋಮವಾರದ ನಂತರ ಬೆಳಗಾವಿ ನಗರಕ್ಕೆ ಕರ್ನಾಟಕ ಮಾತ್ರವಲ್ಲದೆ ಗೋವಾ ಹಾಗೂ ಮಹಾರಾಷ್ಟ್ರದಿಂದಲೂ ಲಕ್ಷಾಂತರ ಸಂಖ್ಯೆಯಲ್ಲಿ ಜನಸಾಗರ ಹರಿದುಬರುವ ನಿರೀಕ್ಷೆಯಿದೆ. ಈ ಸಾಂಪ್ರದಾಯಿಕ ಹಬ್ಬವನ್ನು ಯಾವುದೇ ಭಿನ್ನಾಭಿಪ್ರಾಯಗಳು ಹಾಗೂ ಸಣ್ಣಪುಟ್ಟ ಮನಸ್ತಾಪಗಳಿಗೆ ಅವಕಾಶ ನೀಡದೆ, ಎಲ್ಲರೂ ಪರಸ್ಪರ ಅನ್ಯೋನ್ಯತೆಯಿಂದ ಆಚರಿಸಬೇಕು ಎಂದು ಅನಿಲ್ ಬೆನಕೆ ನಾಡಿನ ಸಮಸ್ತ ಜನತೆಗೆ ಗಣೇಶೋತ್ಸವದ ಹಾರ್ದಿಕ ಶುಭಕೋರಿದ್ದಾರೆ.
ಶ್ರೀರಾಮ ಸೇನಾ ಹಿಂದೂಸ್ತಾನದ ರಮಾಕಾಂತ ಕೋಂಡುಸ್ಕರ, ಭರತ್ ಪಾಟಿಲ್, ಬಿಜೆಪಿ ನಾಯಕ ಮುರಗೇಂದ್ರ ಗೌಡ ಪಾಟಿಲ್, ಯುವ ಉದ್ಯಮಿ ಕಪಿಲ್ ಭೋಸ್ಲೆ ಹಾಗೂ ಯುವ ನಾಯಕ ಸುನೀಲ್ ಜಾಧವ್ ಸೇರಿದಂತೆ ವಿವಿಧ ಗಣ್ಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಗಣೇಶ ಭಕ್ತರು ಭಾಗಿಯಾಗಿದ್ದರು.
