ವಿಜಯಪುರ ಜಿಲ್ಲೆಯ “ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ ಅವರು ಬರಗಾಲ ಘೋಷಣೆ ಮಾಡಬೇಕೆಂಬ ಬೇಡಿಕೆ ಸರಿಯಾಗಿದೆ, ಸತ್ಯ ಇದೆ. ಇಡೀ ವಿಜಯಪುರ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕಿತ್ತು. ಶಾಸಕರಲ್ಲಿ ಭೇದ ಮಾಡದೇ, ಎಲ್ಲಿ ಬರ ಇದೆಯೋ ಅಲ್ಲಿ ಬರಗಾಲ ಘೋಷಣೆ ಮಾಡಬೇಕು. ಕೇಂದ್ರದ ಕಡೆ ಬೊಟ್ಟು ಮಾಡಬೇಡಿ, ನೀವು ಮೊದಲು ಘೋಷಣೆ ಮಾಡಿ, ಕೇಂದ್ರದ ತಂಡ ಬರುತ್ತದೆ” ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ. ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ನಡುವಿನ ಆಂತರಿಕ ಜಗಳದಲ್ಲಿ ನಾನು ಹೋಗುವುದಿಲ್ಲ. ಇಬ್ಬರ ಟೀಕೆಗಳಿಗೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದಿರುವ ಯತ್ನಾಳ್, ನಾಡಗೌಡರ ಬರ ಘೋಷಣೆ ಬೇಡಿಕೆಗೆ ತಮ್ಮ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲವು ಕಡೆ ಶಾಸಕರೇ ಧರಣಿ ಮಾಡುತ್ತಿದ್ದಾರೆ. ಹೀಗಾಗಿ ರಾಜಕೀಯ ಭೇದ ಮರೆತು ರೈತರ ಹಿತದೃಷ್ಟಿಯಿಂದ ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು. ಎಂ.ಬಿ. ಪಾಟೀಲ್ ಅವರು ನಾಡಗೌಡರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ವಿಜಯಪುರದಲ್ಲಿ ಯತ್ನಾಳ ಆಗ್ರಹಿಸಿದ್ದಾರೆ.

