ಬೆಳಗಾವಿ ಮಹಾನಗರದಲ್ಲಿ ಶೇ. 60ರಷ್ಟು ಕನ್ನಡ ನಾಮಫಲಕಗಳ ಕಡ್ಡಾಯ ಅನುಷ್ಠಾನಕ್ಕೆ ಒತ್ತಾಯಿಸಿ ಇಂದು ಮಹಾನಗರ ಪಾಲಿಕೆ ಎದುರು ಯುವ ಕರ್ನಾಟಕ ವೇದಿಕೆಯ ವತಿಯಿಂದ ತೀವ್ರ ಪ್ರತಿಭಟನೆ ನಡೆಸಲಾಗಿದೆ.
ಬೆಳಗಾವಿ ಮಹಾನಗರದಲ್ಲಿ ಎಲ್ಲಾ ವಾಣಿಜ್ಯ ಮಳಿಗೆಗಳ ಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಿರಬೇಕೆಂಬ ಸರ್ಕಾರದ ಆದೇಶವಿದೆ. ಈ ನಿಯಮವನ್ನು ಉಲ್ಲಂಘಿಸಿರುವ ನಾಮಫಲಕಗಳನ್ನು ತಕ್ಷಣವೇ ತೆರವುಗೊಳಿಸಬೇಕೆಂದು ಒತ್ತಾಯಿಸಿ ಇಂದು ಬೆಳಗಾವಿ ಮಹಾನಗರ ಪಾಲಿಕೆ ಎದುರು ಯುವ ಕರ್ನಾಟಕ ವೇದಿಕೆಯ ನೇತೃತ್ವದಲ್ಲಿ ಭಾರಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಹಾನಗರ ಪಾಲಿಕೆಯ ಆವರಣದಲ್ಲಿ ಜಮಾಯಿಸಿದ ಕನ್ನಡಪರ ಹೋರಾಟಗಾರರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯುವ ಕರ್ನಾಟಕ ವೇದಿಕೆಯ ಜಿಲ್ಲಾಧ್ಯಕ್ಷ ಶಿವು ದೇವರವರ, ಉನ್ನತ ಹುದ್ದೆಯಲ್ಲಿರುವ ಕೆಲ ಅಧಿಕಾರಿಗಳು ಕನ್ನಡಪರ ಹೋರಾಟಗಾರರಿಗೆ 15 ನಿಮಿಷಗಳ ಕಾಲಾವಕಾಶ ಕೇಳಿ, ಚರ್ಚಿಸಿ ಉತ್ತರ ನೀಡುವುದಾಗಿ ಆಶ್ವಾಸನೆ ನೀಡಿ ನಂತರ ಹಿಂದಿನ ಬಾಗಿಲಿನಿಂದ ಪರಾರಿಯಾಗಿರುವುದು ಖಂಡನೀಯ ಎಂದರು. ಇಂತಹ ಬೇಜವಾಬ್ದಾರಿ ಅಧಿಕಾರಿಗಳನ್ನು ಸಾರ್ವಜನಿಕವಾಗಿ ಅಯೋಗ್ಯರೆಂದು ಕರೆಯಬೇಕು ಅಥವಾ ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಬೆಳಗಾವಿಯ ಪ್ರತಿಯೊಂದು ಗಲ್ಲಿ-ಗಲ್ಲಿಯಲ್ಲೂ ಸರ್ಕಾರದ ಆದೇಶದಂತೆ ಶೇ. 60ರಷ್ಟು ಕನ್ನಡ ನಾಮಫಲಕಗಳು ಕಡ್ಡಾಯವಾಗಿ ಅಳವಡಿಸಲ್ಪಡಬೇಕು. ಈ ಆದೇಶವನ್ನು ಸಂಪೂರ್ಣವಾಗಿ ಜಾರಿಗೆ ತರುವವರೆಗೂ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಖುದ್ದು ಬಂದು ಸ್ಪಷ್ಟನೆ ನೀಡುವವರೆಗೂ ನಾವು ಪಾಲಿಕೆ ಎದುರು ಧರಣಿ ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಕನ್ನಡದ ಅಸ್ಮಿತೆ ಕಾಪಾಡುವ ಈ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಯುವ ಕರ್ನಾಟಕ ವೇದಿಕೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

