ಕಳೆದ ಹತ್ತು-ಹನ್ನೆರಡು ದಿನಗಳಿಂದ ಹನಿ ನೀರಿಲ್ಲದೆ ಪರದಾಡುತ್ತಿರುವ ಬೆಳಗಾವಿಯ ಶ್ರೀನಗರ, ವಂಟಮೂರಿ ಕಾಲನಿ ಮತ್ತು ಮಾಳಮಾರುತಿ ಪ್ರದೇಶದ ನಿವಾಸಿಗಳು, ಇಂದು ಮಹಾನಗರ ಪಾಲಿಕೆ ಎದುರು ಖಾಲಿ ಕೊಡಗಳನ್ನು ಹಿಡಿದು ಆಕ್ರೋಶ ಹೊರಹಾಕಿದ್ದಾರೆ. ತೆರಿಗೆಯನ್ನು ಮಾತ್ರ ಕಟ್ಟುನಿಟ್ಟಾಗಿ ವಸೂಲಿ ಮಾಡುತ್ತಿರುವ ಅಧಿಕಾರಿಗಳು, ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ತೀವ್ರವಾಗಿ ಕಿಡಿಕಾರಿದ್ದಾರೆ.

ಬೆಳಗಾವಿ ನಗರದ ಶ್ರೀನಗರ, ವಂಟಮೂರಿ ಕಾಲೋನಿ, ಮಾಳಮಾರುತಿ ಮತ್ತು ಮಹಾಂತೇಶ ನಗರ ಸೇರಿದಂತೆ ವಿವಿಧ ಪ್ರಮುಖ ಪ್ರದೇಶಗಳಲ್ಲಿ ಕಳೆದ 10 ರಿಂದ 12 ದಿನಗಳಿಂದ ಕುಡಿಯುವ ನೀರಿನ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ಹಿನ್ನೆಲೆ ಇಂದು ಬೆಳಗಾವಿ ಮಹಾನಗರ ಪಾಲಿಕೆ ಎದುರು ಖಾಲಿ ಕೊಡಗಳನ್ನು ಹಿಡಿದು ಘೋಷಣೆಗಳನ್ನು ಕೂಗೂತ್ತ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ದಿನದ 24 ಗಂಟೆಯೂ ನೀರು ನೀಡುವುದಾಗಿ ಭರವಸೆ ನೀಡಿ ಕನೆಕ್ಷನ್ ನೀಡಲಾಗಿದ್ದರೂ, ಪ್ರಸ್ತುತ ಹನಿ ನೀರೂ ಸಿಗದೆ ಮಹಿಳೆಯರು ಹಾಗೂ ಹಿರಿಯ ನಾಗರಿಕರು ಪರದಾಡುವಂತಾಗಿದೆ. ಆದರೆ ಪಾಲಿಕೆಯಿಂದ ಮಾತ್ರ ನೀರಿನ ಬಿಲ್ ಮತ್ತು ಡೆವಲಪ್ಮೆಂಟ್ ಚಾರ್ಜ್ ಅನ್ನು ತಪ್ಪದೆ ವಸೂಲಿ ಮಾಡಲಾಗುತ್ತಿರುವುದು ಜನರ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ. ನೀರಿನ ತೀವ್ರ ಅಭಾವದ ಜೊತೆಗೆ ಪ್ರದೇಶದಲ್ಲಿ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಒಳಚರಂಡಿ ವ್ಯವಸ್ಥೆ ಇಲ್ಲದೆ ಮತ್ತು ಕಸ ವಿಲೇವಾರಿಯಾಗದೆ ವಾತಾವರಣ ನಾರುತ್ತಿದೆ. ಸಮೀಪದಲ್ಲೇ ಗಣೇಶೋತ್ಸವ ಹಬ್ಬ ಬಂದಿದ್ದರೂ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಯಾವುದೇ ಸ್ಪಂದನೆ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಸಾರ್ವಜನಿಕರು ಸಮಸ್ಯೆ ಹೇಳಿಕೊಳ್ಳಲು ಫೋನ್ ಮಾಡಿದರೆ ಅಧಿಕಾರಿಗಳು ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ, ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ. ಒಂದು ವೇಳೆ ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗದಿದ್ದರೆ, ಮುಂಬರುವ ದಿನಗಳಲ್ಲಿ ಸ್ಥಳೀಯರೊಂದಿಗೆ ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅಖಿಲಾ ಪಠಾಣ್ ಎಚ್ಚರಿಕೆ ನೀಡಿದ್ದಾರೆ.
