Belagavi

ಶತಮಾನದ ಸಂಭ್ರಮದತ್ತ ವಡಗಾಂವನ ಕಾರಬಾರ ಗಲ್ಲಿಯ ಗಣೇಶೋತ್ಸವ

Share

ಬೆಳಗಾವಿ ವಡಗಾಂವದ ಕಾರಬಾರ ಗಲ್ಲಿಯಲ್ಲಿ ನೂರರ ಸಂಭ್ರಮದ ಗಣೇಶೋತ್ಸವದ ಸಡಗರ ಮುಗಿಲು ಮುಟ್ಟಿದೆ. ಈ ಬಾರಿ ವಿಶೇಷ ವಿದ್ಯುತ್ ಅಲಂಕಾರದೊಂದಿಗೆ ಆಗಮಿಸಿರುವ 16 ಅಡಿ ಎತ್ತರದ ಬೃಹತ್ ಗಣೇಶನ ಮೂರ್ತಿಯ ಆಗಮನೋತ್ಸವವು ಭಕ್ತರ ಕಣ್ಮನ ಸೆಳೆದಿದೆ.

ಸಾಂಸ್ಕೃತಿಕ ನಗರಿ ಬೆಳಗಾವಿಯ ವಡಗಾಂವದ ಪ್ರತಿಷ್ಠಿತ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳವು ಈ ಬಾರಿ ತನ್ನ ಮೈಲಿಗಲ್ಲಾದ 100ನೇ ವರ್ಷದ ಸಂಭ್ರಮದಲ್ಲಿದ್ದು, ಶತಮಾನೋತ್ಸವದ ಈ ಐತಿಹಾಸಿಕ ಸಂದರ್ಭವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದೆ. ಈ ಬಾರಿ ಮಂಡಳದ ವತಿಯಿಂದ ಇಡೀ ವಡಗಾಂವ ಭಾಗದಲ್ಲಿ ಕಣ್ಮನ ಸೆಳೆಯುವ ಅತ್ಯಾಕರ್ಷಕ ವಿದ್ಯುತ್ ಅಲಂಕಾರವನ್ನು ಕೈಗೊಳ್ಳಲಾಗಿದ್ದು, ಬರುವ ಭಕ್ತರನ್ನು ದಿವ್ಯ ಲೋಕಕ್ಕೆ ಕರೆದೊಯ್ಯುವಂತೆ ಮಂಟಪ ಮತ್ತು ಬೀದಿಗಳನ್ನು ಶೃಂಗರಿಸಲಾಗಿದೆ. ಶತಮಾನದ ಸಂಭ್ರಮದ ಸಂಕೇತವಾಗಿ ನಿರ್ಮಿಸಿರುವ ಈ ದೀಪಾಲಂಕಾರವು ಸಾರ್ವಜನಿಕರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದ್ದು, ಉತ್ಸವದ ಕಳೆ ಮತ್ತಷ್ಟು ಹೆಚ್ಚಿದೆ. ಸಾಂಪ್ರದಾಯಿಕ ಢೋಲ್ ತಾಶಾ ನಿನಾದದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಯುವಕರು ಹೆಜ್ಜೆಹಾಕಿ ಸಂಭ್ರಮಿಸಿದರು.

ಉತ್ಸವ ಆರಂಭಕ್ಕೂ ಮುನ್ನವೇ ಭಕ್ತರ ಹರ್ಷೋದ್ಗಾರದೊಂದಿಗೆ ಸುಮಾರು 16 ಅಡಿ ಎತ್ತರದ ಭವ್ಯ ಹಾಗೂ ಆಕರ್ಷಕ ಶ್ರೀ ಗಣೇಶನ ಮೂರ್ತಿಯು ಮಂಡಳಕ್ಕೆ ಆಗಮಿಸಿದ್ದು, ಭಕ್ತರಲ್ಲಿ ಅಪಾರ ಸಂಭ್ರಮ ಮೂಡಿಸಿದೆ. ಪ್ರಸಿದ್ಧ ಮೂರ್ತಿಕಾರರಾದ ಮುತಗಾದ ಎಂ.ಜಿ. ಪಾಟೀಲ್ ಅವರ ಹಸ್ತದಿಂದ ಮೂಡಿಬಂದಿರುವ ಈ ಬೃಹತ್ ಮೂರ್ತಿಯು ಅತ್ಯಂತ ಕಲಾತ್ಮಕವಾಗಿದ್ದು, ಗಣಪತಿಯ ದಿವ್ಯ ರೂಪವು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತಿದೆ. ಯಳ್ಳೂರ ರೋಡ್ ಕ್ರಾಸ್‌ನಿಂದ ಆರಂಭವಾದ ಈ ಭವ್ಯ ಆಗಮನೋತ್ಸವದ ಮೆರವಣಿಗೆಯು ಪಿಂಪಳ್ ಕಟ್ಟಾ ಮತ್ತು ಪಾಟೀಲ್ ಗಲ್ಲಿಯ ಮೂಲಕ ಸಾಗಿ ಅಂತಿಮವಾಗಿ ಕಾರಭಾರಿ ಗಲ್ಲಿಯನ್ನು ತಲುಪಿತು.

ಗಲ್ಲಿಯ ಹಿರಿಯ ಗಣ್ಯರಾದ ಯಲ್ಲಪ್ಪ ಕಣಬರಕರ, ರಾಮ್ ಬಾಳೇಕುಂದ್ರಿ, ಫಕೀರಾ ಕುಂಡೇಕರ, ವಿಜಯ್ ಯಳ್ಳೂರಕರ ಹಾಗೂ ಪ್ರಕಾಶ್ ಬಾಳೇಕುಂದ್ರಿ ಅವರು ಚಾಲನೆ ನೀಡಿದ ಈ ಮೆರವಣಿಗೆಯು ಸಾಂಸ್ಕೃತಿಕ ಕಳೆಗಟ್ಟಿತ್ತು. ದಾರಿಯುದ್ದಕ್ಕೂ ನೆರೆದಿದ್ದ ನೂರಾರು ಭಕ್ತರು ಗಣೇಶನ ಆಗಮನವನ್ನು ಕಣ್ತುಂಬಿಕೊಂಡು ಧನ್ಯತಾ ಭಾವªನ್ನು ವ್ಯಕ್ತಪಡಿಸಿದರು.

Tags:

error: Content is protected !!