ಖಾನಾಪುರ ತಾಲೂಕಿನ ರಸ್ತೆಗಳ ಹದಗೆಟ್ಟ ಸ್ಥಿತಿಗೆ ಮತ್ತೊಂದು ನಿದರ್ಶನವೆಂಬಂತೆ, ಬೃಹತ್ ಗುಂಡಿಗಳಿಂದಾಗಿ ಬಸ್ ಸ್ಟೇರಿಂಗ್ ಜಾಯಿಂಟ್ ಮುರಿದು ಸಂಭವಿಸಿದ ಅಪಘಾತದಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರಿಂದ ತೀವ್ರ ಆಗ್ರಹ ಕೇಳಿಬಂದಿದೆ.

ಖಾನಾಪುರ ತಾಲೂಕಿನ ಜಾಮಗಾಂವನಿಂದ ಖಾನಾಪುರಕ್ಕೆ ಬರುತ್ತಿದ್ದ ಸಾರಿಗೆ ಬಸ್ ರವಿವಾರ ಬೆಳಿಗ್ಗೆ 10:30 ರ ಸುಮಾರಿಗೆ ತೇರಗಾಳಿ ಕ್ರಾಸ್ ಮತ್ತು ಶಿರೋಳಿನಾಕಾ ನಡುವಿನ ಇಳಿಜಾರಿನಲ್ಲಿ ತೆರಳುತ್ತಿದ್ದಾಗ, ರಸ್ತೆಯಲ್ಲಿದ್ದ ಬೃಹತ್ ಗುಂಡಿಗೆ ಬಸ್ ಸಿಲುಕಿದ್ದರಿಂದ ಸ್ಟೇರಿಂಗ್ ಜಾಯಿಂಟ್ ಮುರಿದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದಿದೆ. ಅದೃಷ್ಟವಶಾತ್ ಬಸ್ ವೇಗ ಕಡಿಮೆ ಇದ್ದುದರಿಂದ ಮತ್ತು ಚಾಲಕನ ಸಮಯೋಚಿತ ಪ್ರಸಂಗವಧಾನತೆಯಿಂದ ದೊಡ್ಡ ಪ್ರಾಣಾಪಾಯ ತಪ್ಪಿದ್ದು, ಯಾವುದೇ ಜೀವಿತಹಾನಿ ಸಂಭವಿಸಿಲ್ಲ. ಖಾನಾಪುರ-ಹೆಮ್ಮಡಗಾ ರಸ್ತೆಯಲ್ಲಿ ಖಂಡ್ರೆಗಳ ಸಾಮ್ರಾಜ್ಯವೇ ನಿರ್ಮಾಣವಾಗಿದ್ದು, ಇತ್ತೀಚೆಗೆ ನಡೆದ ಸರ್ವಪಕ್ಷ ಸಭೆಯಲ್ಲಿಯೂ ಗುಂಡಿ ಮುಚ್ಚುವಂತೆ ಆಗ್ರಹಿಸಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದೇ ಇಂದಿನ ಅಪಘಾತಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಗಣೇಶೋತ್ಸವ ನಡೆಯುತ್ತಿದ್ದು, ಹಬ್ಬಕ್ಕಾಗಿ ಊರಿಗೆ ಆಗಮಿಸುವ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ರಸ್ತೆ ದುರಸ್ಥಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
