ಬೆಳಗಾವಿ ನಗರದ ಸದಾಸಿವನಗರ ಸ್ಮಶಾನ ಭೂಮಿಯಲ್ಲಿ ಇರುವ ವಿವಿಧ ಸಮಸ್ಯೆಗಳ ಕುರಿತು ಉತ್ತರ ಕ್ಷೇತ್ರದ ಶಾಸಕ ಆಸೀಫ್ (ಸೇಠ್ ಅವರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಮಶಾನದಲ್ಲಿನ ಅಸ್ವಚ್ಛತೆ ಹಾಗೂ ಅಗತ್ಯ ಸೌಲಭ್ಯಗಳ ಕೊರತೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಶಾಸಕರು ಶೀಘ್ರವೇ ಅಭಿವೃದ್ಧಿ ಕಾಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಬೆಳಗಾವಿ ನಗರದ ಸದಾಸಿವನಗರ ಸ್ಮಶಾನ ಭೂಮಿಗೆ ಭೇಟಿ ನೀಡಿದ ಉತ್ತರ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಅವರು ಅಲ್ಲಿನ ಸ್ವಚ್ಛತೆ, ವಿದ್ಯುದ್ದೀಕರಣ (ಇಲೆಕ್ಟ್ರಫಿಕೇಶನ್), ಪೇವರ್ ಬ್ಲಾಕ್ ಹಾಗೂ ಅಂತ್ಯಸಂಸ್ಕಾರಕ್ಕೆ ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಜಿವಂತವಿರುವಾಗ ಯಾವ ರೀತಿ ಸ್ವಾಭಿಮಾನದಿಂದ ಬದುಕುತ್ತೇವೆಯೋ, ಅದೇ ರೀತಿ ಅಂತಿಮ ಯಾತ್ರೆಗೆ ಬರುವವರಿಗೂ ಸೂಕ್ತ ಸೌಲಭ್ಯಗಳು ಸಿಗಬೇಕು ಮತ್ತು ಮೃತರ ಅಂತಿಮ ಪಯಣ ಗೌರವಯುತವಾಗಿರಬೇಕು ಎಂಬ ಉದ್ದೇಶದಿಂದ ಸ್ಮಶಾನದಲ್ಲಿ ಉತ್ತಮ ವಾತಾವರಣ ನಿರ್ಮಿಸುವುದಾಗಿ ತಿಳಿಸಿದರು.
ಇದೇ ವೇಳೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಅಮಿತ್ ದೇಸಾಯಿ, ಸ್ಮಶಾನದಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿದ್ದು, ಕೆಲವೆಡೆ ಮೊಬೈಲ್ ವ್ಯಾನ್ ನಿಲ್ಲಿಸುವುದರಿಂದ ಇದು ಡಂಪಿಂಗ್ ಗ್ರೌಂಡ್ ನಂತೆ ಭಾಸವಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಅಲ್ಲದೆ, ಪ್ರಸ್ತುತ ಜನಸಂಖ್ಯೆಗೆ ತಕ್ಕಂತೆ ಅಂತ್ಯಸಂಸ್ಕಾರದ ಶೆಡ್ಗಳು ಅಪೂರ್ಣವಾಗಿವೆ ಎಂದರು. ಈ ಭೇಟಿಯ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಭಿಯಂತರರು, ಅಧಿಕಾರಿಗಳು ಹಾಗೂ ಪ್ರಮುಖರಾದ ವಿಜಯ್ ಪಾವಶೆ, ರಾಜು ಕಂಗ್ರಾಳಕರ್, ವಿಕ್ರಮ್ ಪಾಟೀಲ್, ಸಂದೀಪ್ ಮುತಗೇಕರ್, ವಿನಾಯಕ ಶಿಂಧೆ, ಅನಂತ್ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
•
