ಬೆಳಗಾವಿ ಕಂಟೋನ್ಮೆಂಟ್ ಪ್ರದೇಶವನ್ನು ಮಹಾನಗರ ನಗರ ಪಾಲಿಕೆಗೆ ಹಸ್ತಾಂತರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಗೂ ಗುತ್ತಿಗೆದಾರರಲ್ಲಿ ಮೂಡಿರುವ ಆತಂಕಪಡುವ ಅವಶ್ಯಕತೆಯಿಲ್ಲ. 112 ಎಕರೆ ಪ್ರದೇಶವನ್ನು ಹೊರತುಪಡಿಸುವ ಪ್ರಸ್ತಾವನೆಯನ್ನು ಮಾತ್ರ ಸದ್ಯ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತ ಲಿಖಿತ ಒಪ್ಪಿಗೆ ಅಥವಾ ಅನುಮೋದನೆ ಇನ್ನೂ ಲಭ್ಯವಾಗಿಲ್ಲ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯಕ್ಕೆ ಮಾತ್ರ ಸೇರಿದೆ. ಎಂದು ಕಾಂಟೋನ್ಮೆಂಟ್ ಸಿಇಓ ಮಂಚಲವಾರ್ ಸುದಾಮ್ ಹರಿವಿಜಯ್ ಹೇಳಿದರು.

ಇಂದು ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದರು. ಬೆಳಗಾವಿ ಕಂಟೋನ್ಮೆಂಟ್ ಪ್ರದೇಶದ ಎಕ್ಸಿಜನ್ ವಿಚಾರಕ್ಕೆ ಸಂಬಂಧಿಸಿದಂತೆ ಕಂಟೋನ್ಮೆಂಟ್ ಬೋರ್ಡ್ ವತಿಯಿಂದ 112 ಎಕರೆ ಪ್ರದೇಶವನ್ನು ಹೊರತುಪಡಿಸುವ ಪ್ರಸ್ತಾವನೆಯನ್ನು ಮಾತ್ರ ಸದ್ಯ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಆದರೆ, ಇದಕ್ಕೆ ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತ ಲಿಖಿತ ಒಪ್ಪಿಗೆ ಅಥವಾ ಅನುಮೋದನೆ ಇನ್ನೂ ಲಭ್ಯವಾಗಿಲ್ಲ. ಇದರೊಂದಿಗೆ ಬೆಳಗಾವಿ ಡಿಸಿ ಹಾಗೂ ಮಹಾನಗರ ಪಾಲಿಕೆಯಿಂದ 756 ಎಕರೆ ಪ್ರದೇಶವನ್ನು ಹಸ್ತಾಂತರಿಸುವ ಮತ್ತೊಂದು ಪ್ರಸ್ತಾವನೆಯು ಬಂದಿದ್ದು, ಈ ಕುರಿತು ಡಿಒ ಮತ್ತು ಸ್ಥಳೀಯ ಮಿಲಿಟರಿ ಪ್ರಾಧಿಕಾರದಿಂದ ಪ್ರಬಲ ಆಕ್ಷೇಪಣೆಗಳು ವ್ಯಕ್ತವಾಗಿವೆ ಎಂದು ಅವರು ತಿಳಿಸಿದ್ದಾರೆ.
ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯಕ್ಕೆ ಮಾತ್ರ ಸೇರಿದೆ. ರಾಜ್ಯ ಸರ್ಕಾರವು ತನ್ನ ಪ್ರಸ್ತಾವನೆಯನ್ನು ರಕ್ಷಣಾ ಸಚಿವಾಲಯಕ್ಕೆ ಕಳುಹಿಸಿಕೊಟ್ಟ ನಂತರವಷ್ಟೇ ಮುಂದಿನ ಹಂತದ ಪ್ರಕ್ರಿಯೆಗಳು ಜರುಗಲಿವೆ ಎಂದು ಸಿಇಒ ತಿಳಿಸಿ ಸ್ಪಷ್ಟನೆ ನೀಡಿದ್ದಾರೆ. ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆದಾರರು ಮತ್ತು ಟೆಂಡರ್ದಾರರಿಗೆ ಪಾವತಿಗಳ ವಿಚಾರದಲ್ಲಿ ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿರುವ ಅವರು, ಮಾಡಿದ ಕೆಲಸಕ್ಕೆ ಖಂಡಿತ ನ್ಯಾಯಯುತ ಹಣ ಸಿಗಲಿದೆ ಎಂದಿದ್ದಾರೆ. ಮುಂಬರುವ ದಿನಗಳಲ್ಲಿ ಕೈಗೊಳ್ಳುವ ಪ್ರತಿಯೊಂದು ನಿರ್ಧಾರವೂ ಸಾರ್ವಜನಿಕರ ಮತ್ತು ಹಿತಾಸಕ್ತರ ಒಳಿತಿಗಾಗಿಯೇ ಇರಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
