Belagavi

ಬೆಳಗಾವಿ ಉತ್ತರ ವಲಯ ಕರ್ತವ್ಯ ಕೂಟ-೨೦೨೬: ಬೆಳಗಾವಿ ನಗರ ಪೊಲೀಸ್ ಘಟಕಕ್ಕೆ ಸರ್ವೋತ್ತಮ ದ್ವಿತೀಯ ಸ್ಥಾನ ಗರಿಮೆ!

Share

ಬೆಳಗಾವಿ ಉತ್ತರ ವಲಯ ಮಟ್ಟದ 8ನೇ ಕರ್ತವ್ಯ ಕೂಟ-೨೦೨೬ ರಲ್ಲಿ ಬೆಳಗಾವಿ ನಗರ ಪೊಲೀಸ್ ಪಡೆ ಅದ್ಭುತ ಸಾಧನೆ ಮಾಡಿದೆ. ವಿವಿಧ ತಾಂತ್ರಿಕ ಹಾಗೂ ವಿಶೇಷ ಕೌಶಲ್ಯ ಸ್ಪರ್ಧೆಗಳಲ್ಲಿ ಒಟ್ಟು ೧೩ ಬಹುಮಾನಗಳನ್ನು ಬಾಚಿಕೊಳ್ಳುವ ಮೂಲಕ ಒಟ್ಟಾರೆ ವಲಯ ಮಟ್ಟದಲ್ಲಿ ಸರ್ವೋತ್ತಮ ದ್ವಿತೀಯ ಸ್ಥಾನ ಪಡೆದು ಇತಿಹಾಸ ನಿರ್ಮಿಸಿದೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಜರುಗಿದ 8ನೇ ಬೆಳಗಾವಿ ಉತ್ತರ ವಲಯ ಮಟ್ಟದ ಕರ್ತವ್ಯ ಕೂಟ-೨೦೨೬ರಲ್ಲಿ ಬೆಳಗಾವಿ ನಗರದ ಪೊಲೀಸ್ ತಂಡವು ಅತ್ಯುತ್ಸಾಹದಿಂದ ಪಾಲ್ಗೊಂಡಿತ್ತು. ಫಿಂಗರ್‌ಪ್ರಿಂಟ್, ಮೆಡಿಕೋ ಲೀಗಲ್, ಹ್ಯಾಂಡ್ಲಿಂಗ್-ಲಿಫ್ಟಿಂಗ್ ಪ್ಯಾಕಿಂಗ್ ಟೆಸ್ಟ್, ಸೈಬರ್ ಕ್ರೈಮ್ ಟ್ರ್ಯಾಕರ್ ಹಾಗೂ ಡಾಗ್ ಸ್ಕ್ವಾಡ್ ಸೇರಿದಂತೆ ಹಲವು ವಿಶೇಷ ವಿಭಾಗಗಳಲ್ಲಿ ನಮ್ಮ ಪೊಲೀಸರು ಮತ್ತು ಶ್ವಾನಗಳು ಅತ್ಯುತ್ತಮ ಕೌಶಲ್ಯ ಪ್ರದರ್ಶಿಸಿವೆ. ಒಟ್ಟು ೧೧ ಪದಕಗಳು ಹಾಗೂ ೨ ಟ್ರೋಫಿಗಳನ್ನು ಒಳಗೊಂಡಂತೆ ೧೩ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ತಂಡವು ತನ್ನ ವೃತ್ತಿಪರ ನೈಪುಣ್ಯತೆಯನ್ನು ಜಗಜ್ಜಾಹೀರುಗೊಳಿಸಿದೆ.

ಜೆ.ಎಚ್. ಶೇಖ್ (ಆರ್‌ಪಿಐ, ಸಿಎಲ್‌ಆರ್ ವಿಭಾಗ) ಅವರ ಸಮರ್ಥ ನೇತೃತ್ವದಲ್ಲಿ ಮೂಡಿಬಂದಿರುವ ಈ ಐತಿಹಾಸಿಕ ಸಾಧನೆಯು ಬೆಳಗಾವಿ ನಗರ ಪೊಲೀಸ್ ಘಟಕಕ್ಕೆ ಕೀರ್ತಿ ತಂದಿದೆ. ಮಂಜುನಾಥ ಬಡಿಗೇರ, ಸಂತೋಷ ದಳವಾಯಿ, ಸರದಾರಗೌಡ ಮುತತ್ತಿ, ರುದ್ರಯ್ಯ ಮಾವಿನಕಟ್ಟಿಮಠ, ಅಜಿತ ಆರ್. ಪಾಟೀಲ, ಎಸ್.ಎಂ. ಗಡಕರಿ ಹಾಗೂ ರಾಕೇಶ್ ತಳವಾರ ಮುಂತಾದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಶಿಸ್ತು, ಸಮರ್ಪಣಾ ಭಾವ ಮತ್ತು ಕರ್ತವ್ಯ ಬದ್ಧತೆಯೇ ಈ ಯಶಸ್ಸಿಗೆ ಕಾರಣವಾಗಿದೆ. ಈ ಎಲ್ಲ ಸಾಧಕ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ವಿಶೇಷ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.

Tags:

error: Content is protected !!