ಬೆಳಗಾವಿಯ ಶನಿಮಂದಿರದಿಂದ ಉಷಾತಾಯಿ ಗೋಗಟೆ ಶಾಲೆಯವರೆಗೆ ರಸ್ತೆಯಲ್ಲಿ ಅಳವಡಿಸಿರುವ ಬ್ಯಾರಿಕೇಡ್ಗಳು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿವೆ. ಗಾಳಿಗೆ ಬಿದ್ದು ಹೋಗುತ್ತಿರುವ ಈ ಬ್ಯಾರಿಕೇಡ್ಗಳಿಂದಾಗಿ ಸವಾರರು ಪ್ರತಿದಿನ ಪ್ರಾಣಭಯದಲ್ಲೇ ಸಂಚರಿಸುವಂತಾಗಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೆಳಗಾವಿಯ ಶನಿಮಂದಿರದಿಂದ ಉಷಾತಾಯಿ ಗೋಗಟೆ ಶಾಲೆಯವರೆಗಿನ ರಸ್ತೆಯಲ್ಲಿ ಸಾರ್ವಜನಿಕರ ಹಾಗೂ ವಾಹನಗಳ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಕಳೆದ ಹದಿನೈದು ದಿನಗಳ ಹಿಂದೆ ಪೊಲೀಸ್ ಇಲಾಖೆಯಿಂದ ರಸ್ತೆಯ ಮಧ್ಯೆ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿತ್ತು. ಆದರೆ ಈ ಬ್ಯಾರಿಕೇಡ್ಗಳ ವ್ಯವಸ್ಥೆಯು ಸವಾರರಿಗೆ ಈಗ ಬಿಸಿತುಪ್ಪವಾಗಿ ಪರಿಣಮಿಸಿದೆ. ಜೋರಾದ ವೇಗದ ಗಾಳಿ ಬೀಸಿದಾಗ ರಸ್ತೆಯಲ್ಲಿ ನಿಲ್ಲಿಸಿರುವ ಈ ಬ್ಯಾರಿಕೇಡ್ಗಳು ಏಕಾಏಕಿ ರಸ್ತೆಗೆ ಉರುಳಿ ಬೀಳುತ್ತಿವೆ. ಇದರಿಂದಾಗಿ ಸಂಚಾರ ದಟ್ಟಣೆಯಲ್ಲಿ ಸಾಗುವ ದ್ವಿಚಕ್ರ ವಾಹನ ಸವಾರರು ದಿಢೀರ್ ನಿಯಂತ್ರಣ ತಪ್ಪಿ ಬಿದ್ದು ಸಣ್ಣಪುಟ್ಟ ಅಪಘಾತಗಳಿಗೆ ಸಿಲುಕಿಕೊಳ್ಳುತ್ತಿದ್ದಾರೆ. ಸಂಚಾರ ನಿಯಂತ್ರಣಕ್ಕೆ ಹಾಕಿದ ಬ್ಯಾರಿಕೇಡ್ಗಳೇ ಈಗ ಸಂಚಾರ ಸುರಕ್ಷತೆಗೆ ಅಪಾಯಕಾರಿಯಾಗಿ ಮಾರ್ಪಟ್ಟಿರುವುದರಿಂದ, ರಾತ್ರಿ ವೇಳೆ ಅಥವಾ ಗಾಳಿ ಬೀಸುವ ಸಮಯದಲ್ಲಿ ಸಂಚರಿಸುವವರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಈ ಸಮಸ್ಯೆಗೆ ಇಲಾಖೆಯು ಸೂಕ್ತ ಪರಿಹಾರ ಕಲ್ಪಿಸಿ, ಬ್ಯಾರಿಕೇಡ್ಗಳು ಬೀಳದಂತೆ ಗಟ್ಟಿಯಾಗಿ ನಿಲ್ಲುವ ವ್ಯವಸ್ಥೆ ಮಾಡಬೇಕು ಅಥವಾ ಅನಗತ್ಯವಿರುವ ಕಡೆ ತೆರವುಗೊಳಿಸಬೇಕು ಎಂದು ಸ್ಥಳೀಯ ಸವಾರರು ಮನವಿ ಮಾಡಿದ್ದಾರೆ.
