Belagavi

ಕೋಟ್ಯಂತರ ರೂ. ಮೌಲ್ಯದ ಜಮೀನು ಕಬಳಿಕೆ: ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದ 80 ವರ್ಷದ ವೃದ್ಧೆ ಬಂಧನ

Share

ಬೇರೊಬ್ಬರ ಹೆಸರಿನಲ್ಲಿದ್ದ ಕೋಟ್ಯಂತರ ಮೌಲ್ಯದ ಜಮೀನಿಗೆ ತಾನೇ ಮಾಲೀಕಳೆಂದು ನಕಲಿ ದಾಖಲೆಗಳ ಮೂಲಕ ಮಾರಾಟ ಮಾಡಿದ್ದ ಆರೋಪದಡಿ 80 ವರ್ಷದ ಮಹಿಳೆಯನ್ನು ಮಾರ್ಕೆಟ್ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಇಲ್ಲಿನ ವಡಗಾಂವ ಗಣೇಶ ಕಾಲೋನಿ ನಿವಾಸಿ ಮಂದಾಕಿನಿ ಸದಾಶಿವ ಪರಿಶವಾಡಕರ ಬಂಧಿತ ಆರೋಪಿ. ಕಣಬರ್ಗಿ ರಸ್ತೆಯ ಮಹಾಂತೇಶ ನಗರದಲ್ಲಿರುವ ಪ್ಲಾಟ್ ನಂ.2313, ಸಿಟಿಎಸ್ ನಂ.9449ರ ಜಾಗ ರತ್ನಾ ಯಶವಂತ ಮಲ್ಲೂಕರ ಅವರ ಹೆಸರಿನಲ್ಲಿತ್ತು. ಅದನ್ನು ಕಬಳಿಸುವ ಉದ್ದೇಶದಿಂದ ಮಂದಾಕಿನಿ, ರತ್ನಾ ಅವರಂತೆ ನಟನೆ ಮಾಡಿ, 2023ರ ಸೆ.16ರಂದು ಬೆಳಗಾವಿ ಉತ್ತರ ಉಪನೋಂದಣಾಧಿಕಾರಿ ಕಚೇರಿಗೆ ತೆರಳಿ ವೆಬ್ ಕ್ಯಾಮೆರಾದಲ್ಲಿ ಫೋಟೊ ತೆಗೆಸಿಕೊಂಡು, ಹೆಬ್ಬೆರಳಿನ ಗುರುತು ಹಾಗೂ ಸಹಿ ನೀಡಿ, ಜಾಗವನ್ನು ಬೇರೆಯವರಿಗೆ ಸೇಲ್‌ಡೀಡ್ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಈ ಸಂಬಂಧ ರತ್ನಾ ಮಲ್ಲೂಕರ ಅವರು 2025ರ ಫೆ.4ರಂದು ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸಿದ ಪೊಲೀಸರು ಮಂದಾಕಿನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ವಂಚನೆ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಕೃತ್ಯಕ್ಕೆ ಸಹಕರಿಸಿದ ಮತ್ತೋರ್ವ ಆರೋಪಿಯಾಗಿರುವ ಕಾಕತಿಯ ಸಿದ್ದೇಶ್ವರ ನಗರದ ನಿವಾಸಿ ರಾಹುಲ್‌ ಅನೀಲ ಮಗದುಮ್ ಎಂಬಾತ ಈಗಾಗಲೇ ದಾಖಲಾಗಿರುವ ಇನ್ನೂ ಎರಡು ಪ್ರಕರಣಗಳಲ್ಲಿ ತಲೆಮರೆಸಿಕೊಂದ್ದು, ಆತನ ಪತ್ತೆಗಾಗಿ ಪೊಲೀಸರು ಶೋಧ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:

error: Content is protected !!