hubbali

ಹುಬ್ಬಳ್ಳಿಯಲ್ಲಿ ಭೀಕರ ಕೊಲೆ ಮಾಡಿದ ಆರೋಪಿಗಳ ಬಂಧನ

Share

ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದೇಶ್ವರ ಪಾರ್ಕ್ ಬಳಿ ಆ.28ರಂದು ದಾದಾಪೀರ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ. 2015ರಲ್ಲಿ ನಡೆದಿದ್ದ ಕೊಲೆ ಪ್ರಕರಣ ಹಾಗೂ 2023ರಲ್ಲಿ ಸಂಭವಿಸಿದ್ದ ಅಪಘಾತದ ಹಿನ್ನೆಲೆಯಲ್ಲಿ ಬೆಳೆದಿದ್ದ ದ್ವೇಷವೇ ಹತ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾದಾಪೀರ್ (30–35) 2015ರಲ್ಲಿ ಕಸಬಾಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಮಾರುತಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಪ್ರಕರಣದ ವಿಚಾರಣೆ ಬಳಿಕ ಆತ ಖುಲಾಸೆಯಾಗಿದ್ದ. ನಂತರ 2017ರಿಂದ ಕಲಘಟಗಿ ತಾಲೂಕಿನ ಗ್ರಾಮವೊಂದರಲ್ಲಿ ನೆಲೆಸಿ ಕೃಷಿ, ಕೋಳಿ ಸಾಕಣೆ ಹಾಗೂ ಜಮೀನು ಖರೀದಿ–ಮಾರಾಟದಲ್ಲಿ ತೊಡಗಿದ್ದ ಎಂದು ಹೇಳಿದರು.
ಮಾರುತಿ ಕೊಲೆ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿಯ ಸಹೋದರ ಹಾಗೂ 2023ರ ಅಪಘಾತದಲ್ಲಿ ಮೃತಪಟ್ಟ ರಾಜು ಅವರ ಪುತ್ರ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದ ಆರೋಪಿಗಳ ವಿವರಗಳನ್ನು ತನಿಖೆ ಪೂರ್ಣಗೊಳ್ಳುವವರೆಗೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.

ದಾದಾಪೀರ್ ಹುಬ್ಬಳ್ಳಿಗೆ ಬಂದಿರುವುದನ್ನು ಆರೋಪಿಗಳು ಹಲವು ಬಾರಿ ಗಮನಿಸಿ, ಅವಕಾಶಕ್ಕಾಗಿ ಕಾಯುತ್ತಿದ್ದರು. ಆ.28ರಂದು ದಾದಾಪೀರ್ ಮತ್ತೊಬ್ಬ ವಯೋವೃದ್ಧನೊಂದಿಗೆ ಬಂದಿದ್ದಾಗ ಹಿಂಬಾಲಿಸಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ದಾಳಿ ಬಳಿಕ ಆರೋಪಿಗಳು ತಾಯಿಯನ್ನು ಭೇಟಿಯಾಗಿದ್ದು, ಆಕೆ ಕೃತ್ಯವನ್ನು ಮೆಚ್ಚಿ ಹಣ ನೀಡಿ ತಪ್ಪಿಸಿಕೊಳ್ಳುವಂತೆ ಸೂಚಿಸಿದ್ದಾಳೆ. ಹೀಗಾಗಿ ಆಕೆಯನ್ನೂ ಬಂಧಿಸಲಾಗಿದೆ ಎಂದು ತಿಳಿಸಿದರು.

ಆರೋಪಿಗಳು ಗುರುತು ಮರೆಮಾಚಲು ಧರ್ಮಸ್ಥಳ ಭಾಗಕ್ಕೆ ತೆರಳಿ ತಲೆ ಬೋಳಿಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೃತ್ಯಕ್ಕೆ ವಾಹನ, ಹಣ, ಬಟ್ಟೆ ಹಾಗೂ ಮಾರಕಾಸ್ತ್ರ ಒದಗಿಸಿದವರೂ ಬಂಧಿತರಾಗಿದ್ದಾರೆ. ಇನ್ನೂ ಮೂರು–ನಾಲ್ಕು ಆರೋಪಿಗಳನ್ನು ಬಂಧಿಸಬೇಕಿದ್ದು, ತನಿಖೆ ಮುಂದುವರಿದಿದೆ ಎಂದು ಆಯುಕ್ತರು ಹೇಳಿದರು.
ಈ ಸಂದರ್ಭದಲ್ಲಿ ಎಸಿಪಿ ಶಿವಾನಂದ ಚಲವಾದಿ, ಇನ್ಸ್ ಪೆಕ್ಟರ್ ಡಿಸೋಜಾ ಇದ್ದರು.

Tags:

error: Content is protected !!