ಅಂಕಲಗಿ ಸಮೀಪದ ಪಾಶ್ಚಾಪುರ ಗ್ರಾಮದಲ್ಲಿ ಗುರುರಾಘವೇಂದ್ರ ಸ್ವಾಮಿಗಳ ೫೦ನೇ ಸುವರ್ಣ ಆರಾಧನಾ ಮಹೋತ್ಸವವು ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು. ಆಲೂರೆವ್ವಾ ದೇವಸ್ಥಾನದಲ್ಲಿ ಗೋಪೂಜೆ ಹಾಗೂ ಪ್ರತಿಷ್ಠಾಪನಾ ಪೂಜೆಯೊಂದಿಗೆ ಆರಂಭವಾದ ಕುಂಭ ಮೆರವಣಿಗೆಗೆ ವಿವಿಧ ಮಠಾಧೀಶರು ಚಾಲನೆ ನೀಡಿ, ಸಮೃದ್ಧಿಯ ಸಂದೇಶ ಸಾರಿದರು.

ಅಂಕಲಗಿ ಭಾಗದ ಪಾಶ್ಚಾಪುರ ಗ್ರಾಮದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ೫೦ನೇ ಸುವರ್ಣ ಆರಾಧನಾ ಮಹೋತ್ಸವದ ಅಂಗವಾಗಿ ಶನಿವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನೆರವೇರಿದವು. ಗ್ರಾಮದ ಆಲೂರೆವ್ವಾ ದೇವಸ್ಥಾನದಲ್ಲಿ ವಿಶ್ವಾರಾಧ್ಯ ಶಿವಯೋಗಿ ಶಿವಾಚಾರ್ಯ ಶ್ರೀಗಳು ಮತ್ತು ಅಭಿನವ ಮಂಜುನಾಥ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಪ್ರತಿಷ್ಠಾಪನಾ ಹಾಗೂ ಗೋಪೂಜೆ ವಿಧ್ಯುಕ್ತವಾಗಿ ಜರುಗಿತು. ನಂತರ ಮಹಿಳೆಯರ ಸಾಂಪ್ರದಾಯಿಕ ಕುಂಭ ಮೇಳದ ಮೆರವಣಿಗೆಗೆ ಶ್ರೀಗಳು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವಾರಾಧ್ಯ ಶಿವಚಾರ್ಯ ಶ್ರೀಗಳು, ಜಾತಿ, ಮತ, ಪಂಗಡಗಳ ಭೇದವಿಲ್ಲದೆ ಮಾನವ ಕುಲ ಒಂದೆಂಬ ಭಾವದಿಂದ ಸರ್ವರೂ ರಾಯರ ಹಬ್ಬದಲ್ಲಿ ಕೈಜೋಡಿಸಿರುವುದು ಮಾದರಿ ಎಂದರು. ಅಭಿನವ ಮಂಜುನಾಥ ಶ್ರೀಗಳು ಆಶೀರ್ವಚನ ನೀಡಿ, ಬಡವ-ಶ್ರೀಮಂತರೆಂಬ ತಾರತಮ್ಯ ತೊಡೆದುಹಾಕಿ ಸಮಾಜವನ್ನು ಒಗ್ಗೂಡಿಸುತ್ತಿರುವ ಆರಾಧನಾ ಸಮಿತಿಯ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.
ದೇವಾಲಯದಿಂದ ಆರಂಭವಾದ ರಾಯರ ಪಲ್ಲಕ್ಕಿ ಉತ್ಸವ ಹಾಗೂ ಮಹಿಳೆಯರ ಕುಂಭ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ವೀರೇಶ ತುಮಕೂರ ಹಾಗೂ ಸಂಗಡಿಗರಿಂದ ಪ್ರದರ್ಶಿತವಾದ ವೀರಭದ್ರ ಕುಣಿತವು ಮೆರವಣಿಗೆಯ ಮೆರುಗನ್ನು ಮತ್ತಷ್ಟು ಹೆಚ್ಚಿಸಿತು. ಧಾರ್ಮಿಕ ವಿಧಿವಿಧಾನಗಳ ಮುಕ್ತಾಯದ ನಂತರ ಸದ್ಭಕ್ತರಿಗೆ ಮಹಾಪ್ರಸಾದ ವತರಿಸಲಾಯಿತು. ಕಾರ್ಯಕ್ರಮದಲ್ಲಿ ಬಸವರಾಜ ಹೊಸಮನಿ, ವೆಂಕಟೇಶ ದೇಶಪಾಂಡೆ, ಬಸವಣ್ಣಿ ಅಂಬಿಗೇರ, ಶಂಕರ ಮಂಡಗಿ, ಶಂಕರ ತಲ್ಲೂರ, ಆರ್.ಕೆ. ದೇಶಪಾಂಡೆ, ಅಣ್ಣಾಸಾಹೇಬ ಮಹಾಜನಶೆಟ್ಟಿ, ಅಶೋಕ ಚಂದಪ್ಪಗೋಳ, ಮಂಜುನಾಥ ಪಾಟೀಲ, ಶಿವಾನಂದ ಮಠಪತಿ, ವಿಶ್ವನಾಥ ಪಾಟೀಲ, ಬಸವರಾಜ ಉದೋಶಿ, ಮಲ್ಲಿಕಾರ್ಜುನ ಮಠಪತಿ, ಕುಮಾರ ದುಂಡಗಿ, ಬಸವರಾಜ ಕುರಬೇಟ, ರಾಮು ಅಂಬಿ, ಬಸವರಾಜ ಸಾವಳಗಿ, ಅಜಿತ ಅಂಬಿ ಸೇರಿದಂತೆ ಮಹಿಳಾ ಸಂಘಟನಾ ಸಮಿತಿ, ಯುವಕ ಸಂಘದ ಪದಾಧಿಕಾರಿಗಳು ಹಾಗೂ ನೂರಾರು ಸದ್ಭಕ್ತರು ಉಪಸ್ಥಿತರಿದ್ದರು. ರಾಮಚಂದ್ರ ಕಾಕಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
